ನವದೆಹಲಿ (ಅ.22): ಪಾಕ್‌ ಆಕ್ರಮಿತ ಕಾಶ್ಮೀರದ 3 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ್ದೇವೆ ಎಂಬ ಭಾರತೀಯ ಸೇನೆಯ ಹೇಳಿಕೆ ಸುಳ್ಳು ಎಂದು ಪ್ರತಿಪಾದಿಸಿರುವ ಪಾಕಿಸ್ತಾನ, ಯಾವುದೇ ವಿದೇಶಿ ರಾಯಭಾರಿ ಅಥವಾ ಮಾಧ್ಯಮಗಳನ್ನು ದಾಳಿ ನಡೆದ ಸ್ಥಳಕ್ಕೆ ಕರೆತಂದು ತನ್ನ ವಾದವನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದೆ.

ಭಾರತೀಯ ಸೇನಾ ಮುಖ್ಯಸ್ಥರು 3 ಶಿಬಿರಗಳನ್ನು ನಾಶ ಮಾಡಿರುವುದಾಗಿ ಹೇಳಿದ್ದಾರೆ. ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರ ಹೇಳಿಕೆಯಿಂದ ಬೇಸರವಾಗಿದೆ. ದಾಳಿ ಮಾಡಲು ಅಲ್ಲಿ ಶಿಬಿರಗಳೇ ಇಲ್ಲ. ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಯಾವುದೇ ವಿದೇಶಿ ರಾಜತಾಂತ್ರಿಕ/ಮಾಧ್ಯಮದವರನ್ನು ಕರೆತಂದು ತಮ್ಮ ವಾದವನ್ನು ಸಾಬೀತುಪಡಿಸಲಿ ಎಂದು ಪಾಕಿಸ್ತಾನದ ಸೇನಾ ವಕ್ತಾರ ಮೇಜರ್‌ ಜನರಲ್‌ ಆಸಿಫ್‌ ಗಫರ್‌ ಅವರು ಟ್ವೀಟ್‌ ಮಾಡಿದ್ದಾರೆ.

 

ಪುಲ್ವಾಮಾ ದಾಳಿ ಬಳಿಕ ಭಾರತೀಯ ಸೇನಾ ನಾಯಕತ್ವದ ಸುಳ್ಳು ಹೇಳಿಕೆ ನೀಡುವ ಪ್ರವೃತ್ತಿ ಈ ಭಾಗದ ಶಾಂತಿಗೆ ತೊಡಕಾಗಿದೆ. ಇದು ವೃತ್ತಿಪರ ಮಿಲಿಟರಿ ನೈತಿಕತೆಗೆ ವಿರುದ್ಧವಾದುದು ಎಂದು ಹೇಳಿದ್ದಾರೆ.

ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ ವಿರುದ್ಧ ಭಾರತೀಯ ಸೇನೆ ಪ್ರತಿ ದಾಳಿ ನಡೆಸಿದೆ. 3 ಉಗ್ರಗಾಮಿ ಶಿಬಿರಗಳು ನಾಶವಾಗಿವೆ. ಒಂದು ಶಿಬಿರಕ್ಕೆ ತೀವ್ರ ರೀತಿಯ ಹಾನಿಯಾಗಿದೆ. 6ರಿಂದ 10 ಪಾಕಿಸ್ತಾನಿ ಯೋಧರು ಹತರಾಗಿದ್ದಾರೆ.

ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಉಗ್ರರು ಸಾವಿಗೀಡಾಗಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಹೇಳಿಕೆ ನೀಡಿದ್ದರು. ಕನಿಷ್ಠ 35 ಉಗ್ರರು ಈ ದಾಳಿ ವೇಳೆ ಹತರಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆಲ ಮಾಧ್ಯಮಗಳು ಹಾಗೂ ಸುದ್ದಿಸಂಸ್ಥೆಗಳು ವರದಿ ಮಾಡಿದ್ದವು. ಆದರೆ ನಾಗರಿಕ ಪ್ರದೇಶಗಳ ಮೇಲೆ ಭಾರತ ದಾಳಿ ನಡೆಸಿದೆ ಎಂದು ಪಾಕಿಸ್ತಾನ ದೂಷಿಸಿತ್ತು.