ಶ್ರೀನಗರ: ನ.13ರಂದು ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸಿದ್ದ ಪಾಕಿಸ್ತಾನ ದೊಡ್ಡ ಮಟ್ಟದ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿತ್ತು. ಈ ವೇಳೆ ಪಾಕ್‌ ಸೇನೆಯ ನೆರವು ಪಡೆದು ಉಗ್ರರು ಒಳನುಸುಳಿದ್ದರು. ಇದರಿಂದಾಗಿ ಭಾರತದ ಕಡೆಯಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸಿದೆ ಎಂದು ಬಿಎಸ್‌ಎಫ್‌ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಪಾಕಿಸ್ತಾನದ ದಾಳಿಯಲ್ಲಿ ಹುತಾತ್ಮರಾದ ಐವರು ಯೋಧರಿಗೆ ಬಿಎಸ್‌ಎಫ್‌ ವತಿಯಿಂದ ಭಾನುವಾರ ಅಂತಿಮ ನಮನ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಐಜಿಪಿ ರಾಜೇಶ್‌ ಮಿಶ್ರಾ, 2003ರಲ್ಲಿ ಮಾಡಿಕೊಂಡ ಕದನವಿರಾಮ ಒಪ್ಪಂದದ ಪ್ರಕಾರ ಪಾಕಿಸ್ತಾನ ಅಥವಾ ಭಾರತ ಗಡಿಯಲ್ಲಿ ದೊಡ್ಡ ಮಟ್ಟದ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವಂತೆ ಇಲ್ಲ ಎಂದರು.

ಆದರೆ, ಭಾರತದ ಕಡೆಯಿಂದ ಯಾವುದೇ ಪ್ರಚೋದನೆ ಇಲ್ಲದೇ ಇದ್ದರೂ ಪಾಕಿಸ್ತಾನ ಪಡೆಗಳು ಉರಿ, ನಾಗೌನ್‌, ಕೆರನ್‌ ಮತ್ತು ಗುರೇಜ್‌ ಸೆಕ್ಟರ್‌ಗಳಲ್ಲಿ ದೊಡ್ಡ ಮಟ್ಟದ ಫಿರಂಗಿ, ಮೊರ್ಟರ್‌ ಹಾಗೂ ಇತರ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದೆ. ಪಾಕಿಸ್ತಾನದ ದಾಳಿಯಿಂದ ನಾಗರಿಕ ಪ್ರದೇಶಗಳ ಮೇಲೆ ಭಾರೀ ಪ್ರಮಾಣ ಹಾನಿ ಸಂಭವಿಸಿದೆ. ಆರು ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಪಾಕ್‌ ದಾಳಿಗೆ ಭಾರತ ಕೂಡ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಹೇಳಿದ್ದಾರೆ.