ನವದೆಹಲಿ(ಅ.21): ಜಮ್ಮು-ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಹಾತೊರೆಯುತ್ತಿರುವ ಪಾಕಿಸ್ತಾನ ಇದೀಗ ಹೊಸ ಶೈಲಿಯ ದಾಳಿಗೆ ಸಂಚು ರೂಪಿಸಿದ್ದು, ಸ್ಫೋಟಕ ತುಂಬಿದ ಡ್ರೋನ್‌ ಬಳಸುವ ತರಬೇತಿಯನ್ನು ಭಯೋತ್ಪಾದಕ ಸಂಘಟನೆಗಳಿಗೆ ನೀಡುತ್ತಿದೆ ಎಂದು ತಿಳಿದುಬಂದಿದೆ.

ಸಣ್ಣ ಡ್ರೋನ್‌ಗಳಲ್ಲಿ ಸ್ಫೋಟಕ ತುಂಬಿ ಭಾರತದ ಗಡಿಯೊಳಗೆ ಇರುವ ಸೇನಾ ಕ್ಯಾಂಪ್‌ಗಳು ಹಾಗೂ ಗಡಿ ಭದ್ರತಾ ಪೋಸ್ಟ್‌ಗಳ ಮೇಲೆ ದಾಳಿ ನಡೆಸುವುದು ಪಾಕಿಸ್ತಾನದ ಸಂಚು ಆಗಿದೆ. ಈ ತಂತ್ರವನ್ನು ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರರು ಸಿರಿಯಾ ಹಾಗೂ ಇರಾಕ್‌ನಲ್ಲಿ ದಾಳಿ ನಡೆಸಲು ಬಳಸುತ್ತಿದ್ದರು. ಇದರಿಂದ ಪ್ರೇರಿತವಾಗಿರುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’, ಇದನ್ನೇ ನಕಲು ಮಾಡಲು ಮುಂದಾಗಿದೆ. ಅತ್ಯಂತ ಅಗ್ಗದ ಡ್ರೋನ್‌ಗಳನ್ನು ಕೇವಲ ಗಡಿಯಾಚೆಯ ಚಟುವಟಿಕೆ ಮೇಲೆ ನಿಗಾ ಇರಿಸಲಷ್ಟೇ ಅಲ್ಲ, ದಾಳಿ ನಡೆಸಲೂ ಬಳಸಬಹುದು ಎಂಬ ಬಗ್ಗೆ ಏಪ್ರಿಲ್‌ ಹಾಗೂ ಮೇನಲ್ಲಿ ಉಗ್ರ ಸಂಘಟನೆಗಳಾದ ಲಷ್ಕರ್‌ ಎ ತೊಯ್ಬಾ ಹಾಗೂ ಜೈಷ್‌ ಎ ಮೊಹಮ್ಮದ್‌ ಜತೆ ಸಭೆ ನಡೆಸಿ ಚರ್ಚಿಸಿದೆ. ಈ ಸಭೆಗಳು ಪಂಜಾಬ್‌ ಪ್ರಾಂತ್ಯದ ತಕ್ಷಶಿಲೆ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಗಳಲ್ಲಿ ನಡೆದಿದ್ದವು ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಸುಮಾರು 3 ಕಿ.ಮೀ. ಸಾಗಬಲ್ಲ ಹಾಗೂ 5 ಕೆ.ಜಿ. ಸ್ಫೋಟಕ ಸಾಗಿಸಬಲ್ಲ ಸಣ್ಣ ಡ್ರೋನ್‌ಗಳನ್ನು (ಕ್ವಾಡ್‌ಕಾಪ್ಟರ್‌) ಬಳಕೆ ಮಾಡಿ, ನಿಗದಿತ ಗುರಿಗಳ ಮೇಲೆ ದಾಳಿ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿತ್ತು ಎಂದು ಗೊತ್ತಾಗಿದೆ.

ಭಾರತ ಸಜ್ಜು- ಬಿಎಸ್‌ಎಫ್‌:

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಅಧಿಕಾರಿಯೊಬ್ಬರು, ‘ಪಾಕಿಸ್ತಾನದ ಈ ಸಂಚು ನಮ್ಮ ಗಮನಕ್ಕೂ ಬಂದಿದೆ. ಹೀಗಾಗಿ ಯಾವುದೇ ಸ್ಥಿತಿಗೆ ಸನ್ನದ್ಧವಾಗಿರುವಂತೆ ನಮ್ಮ ಪಡೆಗಳಿಗೆ ಸೂಚಿಸಲಾಗಿದೆ. ಡ್ರೋನ್‌ಗಳು ಹಾರಿಬಂದರೆ ಅವುಗಳನ್ನು ನಿಷ್ಕಿ್ರಯಗೊಳಿಸಿ, ನಾವು ಪ್ರತಿದಾಳಿ ಕೂಡ ಮಾಡಬಹುದು’ ಎಂದಿದ್ದಾರೆ.

ಈ ಹಿಂದೆ ಪಾಕಿಸ್ತಾನವು ಡ್ರೋನ್‌ ಬಳಸಿ ಭಾರತಕ್ಕೆ ಡ್ರಗ್ಸ್‌, ಶಸ್ತ್ರಾಸ್ತ್ರ, ಸ್ಫೋಟಕ ಹಾಗೂ ನಕಲಿ ನೋಟುಗಳನ್ನು ರವಾನಿಸಿದ್ದು ಇಲ್ಲಿ ಗಮನಾರ್ಹ.