ಪೆಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ದ ಉಗ್ರರ ಗುಂಪಿನಲ್ಲಿ ಕೆಲವರು ಅಪ್ರಾಪ್ತರಾಗಿದ್ದರು . ತಲೆ ಮೇಲೆ ಕ್ಯಾಮೆರಾ ಧರಿಸಿಕೊಂಡು ಬಂದು ದಾಳಿ ನಡೆಸಿದ್ದರು. ಈ ಕುರಿತು ಮಾಹಿತಿಯನ್ನು ಬದುಕುಳಿದ ಕುಟುಂಬ ಬಿಚ್ಚಿಟ್ಟಿದೆ.
ಅನಂತನಾಗ್(ಏ.25) ಪಹಲ್ಗಾಂ ಉಗ್ರ ದಾಳಿಯಲ್ಲಿ ಕೆಲ ಅಪ್ರಾಪ್ತರೂ ಭಾಗಿಯಾಗಿದ್ದರು ಎಂಬ ಆತಂಕಕಾರಿ ವಿಷಯವನ್ನು ದುರಂತದಲ್ಲಿ ಬದುಕುಳಿದು ಬಂದ ಮಧ್ಯಪ್ರದೇಶದ ಕುಟುಂಬವೊಂದು ಹಂಚಿಕೊಂಡಿದೆ. ದಾಳಿ ವೇಳೆ ಸುಶೀಲಾ ನಥಾನಿಯನ್ ಬಲಿಯಾಗಿದ್ದರು. ಆದರೆ ಅವರ ಪತ್ನಿ ಜೆನ್ನಿಫರ್ ಮತ್ತು ಪುತ್ರ ಆಸ್ಟಿನ್ ಬದುಕುಳಿದುಬಂದಿದ್ದಾರೆ. ಜೆನ್ನಿಫರ್ ಹೇಳಿರುವ ಪ್ರಕಾರ ‘ಉಗ್ರರ ಜತೆಯಲ್ಲಿ ಸುಮಾರು 15 ವರ್ಷದ ಐದಾರು ಬಾಲಕರಿದ್ದರು. ನಮ್ಮ ಮೇಲೆ ದಾಳಿಯಾಗುವಾಗ ಅವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ತಲೆಯ ಮೇಲೆ ಕ್ಯಾಮೆರಾ ಧರಿಸಿದ್ದರು. ನನ್ನ ಕಣ್ಣಮುಂದೆಯೇ 6 ಜನರನ್ನು ಗುಂಡಿಕ್ಕಿ ಕೊಂದರು’ ಎಂದು ಹೇಳಿದ್ದಾರೆ.
ಪಹಲ್ಗಾಮ್ ನರಮೇಧ ಬೆನ್ನಲ್ಲೇ ಕೇಕ್ ಕಟ್
ಕಾಶ್ಮೀರದ ಪೆಹಲ್ಗಾಮ್‌ನಲ್ಲಿ 26 ಪ್ರವಾಸಿಗರ ನರಮೇಧ ನಡೆದ ಹೊತ್ತಿನಲ್ಲೇ ನವದೆಹಲಿಯಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಕೇಕ್ ಕತ್ತರಿಸಿದ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಕೇಕ್ ಬಾಕ್ಸ್ ಹಿಡಿದುಕೊಂಡು ರಾಯಭಾರ ಕಚೇರಿಯೊಳಗೆ ತೆರಳುತ್ತಿದ್ದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಮಾಧ್ಯಮಗಳು ಕೇಕ್ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ನೀವು ರಾಯಭಾರ ಕಚೇರಿಯ ಸಿಬ್ಬಂದಿಯೇ ಎಂದು ಪ್ರಶ್ನಿಸಿದಾಗ ಆತ ಯಾವುದೇ ಉತ್ತರ ನೀಡಿದೇ ತಪ್ಪಿಸಿಕೊಂಡು ಹೋಗಿದ್ದಾನೆ. ಭಾರತದಲ್ಲಿನ ದುರಂತದ ಹೊತ್ತಿನಲ್ಲೂ ಪಾಕ್ ಅಧಿಕಾರಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದ ಬಗ್ಗೆ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. ಇದು ಪ್ರವಾಸಿಗರ ಹತ್ಯೆಯನ್ನು ಸಂಭ್ರಮಿಸಲು ಮಾಡಿದ್ದು ಎಂಬ ಟೀಕೆ ವ್ಯಕ್ತವಾಗಿದೆ.
ಕಲ್ಮಾ ಪಠಿಸಿದವರ ಬಿಟ್ಟರು, ಹಿಂದೂಗಳಿಗೆ ಗುಂಡಿಟ್ಟರು: ಮೃತ ಶೈಲೇಶ್ ಪ ...
ಗಡಿಯಲ್ಲಿ 42 ಉಗ್ರ ಲಾಂಚ್‌ಪ್ಯಾಡ್ ಸಕ್ರಿಯ
ಪಹಲ್ಗಾಂ ಉಗ್ರರ ದಾಳಿ ಬೆನ್ನಲ್ಲೇ ಗಡಿನಿಯಂತ್ರಣ ರೇಖೆ ಬಳಿ ಕಾರ್ಯಾಚರಿಸುತ್ತಿರುವ ಉಗ್ರರ ಅಡಗುತಾಣಗಳ ಪತ್ತೆ ಕಾರ್ಯವನ್ನು ಭಾರತ ಚುರುಕುಗೊಳಿಸಿದ್ದು, ಈ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿಯಲ್ಲಿ 42 ಉಗ್ರರ ಅಡುಗುತಾಣ ಪತ್ತೆಯಾಗಿದೆ. ಅದರಲ್ಲಿ 150-200 ತರಬೇತಿ ಪಡೆದ ಉಗ್ರರು ಭಾರತದೊಳಗೆ ನುಸುಳಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.60ಕ್ಕೂ ಹೆಚ್ಚು ಉಗ್ರರು: ಹಿಜ್ಬುಲ್ ಮುಜಾಹಿದೀನ್(ಎಚ್‌ಎಂ), ಜೈಶ್-ಎ-ಮೊಹಮ್ಮದ್(ಜೆಇಎಂ) ಮತ್ತು ಲಷ್ಕರ್ ಎ ತೊಯ್ಬಾ(ಎಲ್‌ಇಟಿ)ಗೆ ಸೇರಿದ 60 ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇವರ ಜತೆಗೆ 17 ಸ್ಥಳೀಯ ಉಗ್ರರೂ ಹಿಂಸಾಚಾರಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
