Padmanabha Swamy Temple Gold Missing Case : ಫೋರ್ಟ್ ಪೊಲೀಸರು ಸಲ್ಲಿಸಿದ ಅರ್ಜಿಯ ಮೇರೆಗೆ ಈ ಮಹತ್ವದ ಆದೇಶ ಬಂದಿದೆ. ತಿರುವನಂತಪುರಂ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ಮಹತ್ವದ ಆದೇಶವನ್ನು ನೀಡಿದೆ.
ಕೇರಳದ ಪವಿತ್ರ ಪದ್ಮನಾಭಸ್ವಾಮಿ ದೇವಸ್ಥಾನದಿಂದ 13 ಪವನ್ ಚಿನ್ನ ನಾಪತ್ತೆಯಾದ ಆಘಾತಕರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ತಿರುವನಂತಪುರಂ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 6 ಮಂದಿ ದೇವಸ್ಥಾನ ಸಿಬ್ಬಂದಿಗೆ ಸುಳ್ಳು ಪತ್ತೆ (ಪಾಲಿಗ್ರಾಫ್) ಪರೀಕ್ಷೆ ನಡೆಸುವಂತೆ ಆದೇಶ ಹೊರಡಿಸಿದೆ. ಫೋರ್ಟ್ ಪೊಲೀಸರು ಸಲ್ಲಿಸಿದ ಅರ್ಜಿಯ ಮೇರೆಗೆ ಈ ಮಹತ್ವದ ಆದೇಶ ಬಂದಿದೆ. ಈ ಮೂಲಕ ತನಿಖೆಗೆ ಹೊಸ ತಿರುವು ನೀಡಿದೆ.
104 ಗ್ರಾಂ ಚಿನ್ನ ನಾಪತ್ತೆ:
ದೇವಸ್ಥಾನದ ಗರ್ಭಗುಡಿ ಬಾಗಿಲಿಗೆ ಚಿನ್ನದ ಲೇಪನ ಮಾಡಲು ಸ್ಟ್ರಾಂಗ್ ರೂಂನಿಂದ ತೆಗೆದುಕೊಂಡಿದ್ದ ಚಿನ್ನದಲ್ಲಿ 13 ಪವನ್ (ಸುಮಾರು 104 ಗ್ರಾಂ) ಚಿನ್ನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಘಟನೆ ಕಳೆದ ಮೇ ತಿಂಗಳಿನ 7ರಿಂದ 10ರ ನಡುವೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದೇವಸ್ಥಾನದ ಮ್ಯಾನೇಜರ್ ಈ ಘಟನೆ ವಿಚಾರವಾಗಿ ಫೋರ್ಟ್ ಪೊಲೀಸ್ ನಿಲಯಕ್ಕೆ ದೂರು ನೀಡಿದ್ದರು.
ಮರಳಿನಲ್ಲಿ ಮುಚ್ಚಿಟ್ಟ ಸ್ಥಿತಿಯಲ್ಲಿ ಚಿನ್ನದ ಗಟ್ಟಿ ಪತ್ತೆ!
ತನಿಖೆಯಲ್ಲಿ, ದೇವಸ್ಥಾನದ ಆವರಣದಲ್ಲಿ ಮರಳಿನಲ್ಲಿ ಮುಚ್ಚಿಟ್ಟ ಸ್ಥಿತಿಯಲ್ಲಿ ಚಿನ್ನದ ಗಟ್ಟಿ ಪತ್ತೆಯಾಗಿತ್ತು. ಇದು ದೇವಾಲಯದೊಳಗಿನ ಸಿಬ್ಬಂದಿಯಿಂದಲೇ ನಡೆದಿರುವ ಕೃತ್ಯವೆಂದು ಪೊಲೀಸರು ಅನುಮಾನಿಸಿದ್ದಾರೆ ಸದ್ಯ ನ್ಯಾಯಾಲಯದ ಆದೇಶದ ಪ್ರಕಾರ, ಸುಳ್ಳು ಪತ್ತೆ ಪರೀಕ್ಷೆ ನಡೆಸುವ ಮುನ್ನ ಸಂಬಂಧಿತ ಅನುಮತಿ ಪತ್ರ ಪಡೆಯಬೇಕು ಎಂದು ಕೋರ್ಟ್ ತಿಳಿಸಿದೆ. ಈ ಆದೇಶವು ದೇವಸ್ಥಾನದ ಐತಿಹಾಸಿಕ ಮತ್ತು ಆರ್ಥಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ನೀಡಲ್ಪಟ್ಟಿದ್ದು, ಚಿನ್ನ ನಾಪತ್ತೆಯ ಹಿನ್ನೆಲೆಯಲ್ಲಿ ಭಕ್ತರು ಆತಂಕ ಮೂಡಿದೆ. ಪೊಲೀಸ್ ತನಿಖೆಯಲ್ಲಿ ಹೊಸ ಸಾಕ್ಷ್ಯಗಳು ಬಹಿರಂಗವಾಗುವ ಸಾಧ್ಯತೆಯಿದೆ.
