ಮೆಕ್ಸಿಕೋ ಸಿಟಿ(ಜ.21): ಮೆಕ್ಸಿಕೋದಲ್ಲಿ ಕೊರೋನಾ ಸೋಂಕು ಮತ್ತು ಸಾವಿನ ಪ್ರಮಾಣ ತೀವ್ರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಸಿಲಿಂಡರ್‌ ಕಳ್ಳತನ ಪ್ರಕರಣಗಳೂ ಏರಿಕೆಯಾಗುತ್ತಿವೆ. ಮಂಗಳವಾರ ಇಲ್ಲಿ ಬರೋಬ್ಬರಿ 1,584 ಕೊರೋನಾ ಸಾವು ಮತ್ತು 18,894 ಹೊಸ ಸೋಂಕು ದೃಢವಾಗಿದೆ.

ಈ ಹಿನ್ನೆಲೆಯಲ್ಲಿ ಜನರು ಆಮ್ಲಜನಕ ಸಿಲಿಂಡರ್‌ಗಳ ಸಂಗ್ರಹಣೆಯಲ್ಲಿ ಮಗಿಬಿದ್ದಿದ್ದಾರೆ. ಮಂಗಳವಾರ ಇಲ್ಲಿನ ಉತ್ತರ ಸೊನೋರಾ ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಬಂದೂಕು ತೋರಿಸಿ, ಬೆದರಿಸಿ ಆಸ್ಪತ್ರೆಯಲ್ಲಿದ್ದ ಎಲ್ಲಾ ಆಮ್ಲಜನಕ ಸಿಲಿಂಡರ್‌ಗಳನ್ನೂ ಹೊತ್ತೊಯ್ದಿದ್ದಾನೆ. ಮತ್ತೊಂದೆಡೆ 44 ಸಿಲಿಂಡರ್‌ ಟ್ಯಾಂಕ್‌ಗಳನ್ನು ತುಂಬಿದ್ದ ಟ್ರಕ್‌ವೊಂದನ್ನು ಪೊಲೀಸರು ವಶಪಡಿಸಿಕೊಂಡು, ಪ್ರಕರಣ ಸಂಬಂಧ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ಕೊರೋನಾ ರೋಗಿಗಳ ಉಳಿವಿಗೆ ಬಾಡಿಗೆ ಪಡೆದ ಆಮ್ಲಜನಕ ಟ್ಯಾಂಕ್‌ಗಳನ್ನು ವಾಪಸ್‌ ನೀಡಿ ಎಂದು ಅಧಿಕಾರಿಗಳು ಅಭಿಯಾನ ಆರಂಭಿಸಿದ ಬೆನ್ನಲ್ಲೇ ಕಳವು ಪ್ರಕರಣಗಳು ಹೆಚ್ಚಿವೆ. ಮೆಕ್ಸಿಕೋದಲ್ಲಿ ಈವರೆಗೆ 16.7 ಲಕ್ಷ ಮಂದಿಗೆ ಕೋವಿಡ್‌ ಸೋಂಕು ತಗುಲಿದ್ದು, 1,95,000 ಜನರು ಬಲಿಯಾಗಿದ್ದಾರೆ.