ನವದೆಹಲಿ(ಫೆ.03): ರಾಷ್ಟ್ರ ರಾಜಧಾನಿ ದೆಹಲಿಯ ಶೇ.56ರಷ್ಟುಜನರಲ್ಲಿ ಕೊರೋನಾ ವೈರಸ್‌ ವಿರುದ್ಧ ಹೋರಾಡುವ ಪ್ರತಿಕಾಯ ಶಕ್ತಿ ಉತ್ಪತ್ತಿ ಆಗಿದೆ ಎಂಬ ಸಂಗತಿ ಇತ್ತೀಚಿನ ಸೆರೋ ಸರ್ವೆಯಿಂದ ತಿಳಿದುಬಂದಿದೆ.

ಜ.15ರಿಂದ ಜ.23ರವರೆಗೆ 11 ಜಿಲ್ಲೆಗಳ 28,000 ಜನರಿಂದ ರಕ್ತದ ಮಾದರಿಯನ್ನು ಪಡೆದು ನಡೆಸಿದ 5ನೇ ಸೆರೋ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌, ದೆಹಲಿ ಹರ್ಡ್‌ ಇಮ್ಯುನಿಟಿಯತ್ತ ಸಾಗುತ್ತಿರುವುದಕ್ಕೆ ಮತ್ತಷ್ಟು ಪುಷ್ಠಿ ದೊರಕಿದೆ.

ಆದರೆ, ಈಗಲೇ ಇದನ್ನು ನಿರ್ಧರಿಸಲು ಆಗದು. ಈ ಬಗ್ಗೆ ತಜ್ಞರು ಮಾತ್ರವೇ ಸ್ಪಷ್ಟಚಿತ್ರಣ ನೀಡಲು ಸಾಧ್ಯ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ನ.11ರಂದು ಅತ್ಯಧಿಕ 8,593 ಪ್ರಕರಣಗಳು ದಾಖಲಾಗಿದ್ದವು. ಆದರೆ, ಸೋಮವಾರದಂದು ದೆಹಲಿಯಲ್ಲಿ ಹೊಸದಾಗಿ 121 ಪ್ರಕರಣಗಳು ಮಾತ್ರವೇ ಪತ್ತೆ ಆಗಿವೆ.