* ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಜಲ ಜೀವನ ಮಿಶನ್‌ನ 100 ದಿನಗಳ ಕಾರ್ಯಕ್ರಮ ಆರಂಭ* ಶೇ.35ರಷ್ಟು ಶಾಲೆ, ಅಂಗನವಾಡಿಗಳಲ್ಲಿ ನಲ್ಲಿ ನೀರಿಲ್ಲ* ಕೋವಿಡ್‌ 19 ಸುರಕ್ಷಾ ಕ್ರಮದಂತೆ ಪದೇ ಪದೇ ಕೈ ತೊಳೆಯಲು ಅವಶ್ಯವಾಗಿರುವ ನಲ್ಲಿಗಳ ಜೋಡಣೆ ಕಾರ್ಯ ನಡೆದಿಲ್ಲ

ನವದೆಹಲಿ(ಜು.27): ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಜಲ ಜೀವನ ಮಿಶನ್‌ನ 100 ದಿನಗಳ ಕಾರ್ಯಕ್ರಮ ಆರಂಭವಾಗಿ ಏಳು ತಿಂಗಳು ಕಳೆದರೂ ಶೇ.35ರಷ್ಟುಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಇನ್ನೂ ನಲ್ಲಿ ನೀರಿನ ಸೌಲಭ್ಯ ಒದಗಿಸಲಾಗಿಲ್ಲ. ಕಳೆದ ಮಾಚ್‌ರ್‍ನಲ್ಲಿ ಜಲಜೀವನ್‌ ಮಿಷನ್‌ ನೀಡಿರುವ ವರದಿಯ ಪ್ರಕಾರ ಕುಡಿಯುವ ನೀರನ್ನು ಪೂರೈಸಲಾಗಿದೆ. ಆದರೆ ಕೋವಿಡ್‌ 19 ಸುರಕ್ಷಾ ಕ್ರಮದಂತೆ ಪದೇ ಪದೇ ಕೈ ತೊಳೆಯಲು ಅವಶ್ಯವಾಗಿರುವ ನಲ್ಲಿಗಳ ಜೋಡಣೆ ಕಾರ್ಯ ನಡೆದಿಲ್ಲ.

ಪ್ರತಿ ಶಾಲೆಗಳಿಗೂ ಕುಡಿಯಲು, ಅಡಿಗೆ ಮಾಡಲು, ಕೈ ತೊಳೆಯಲು ನೀರಿನ ಸಂಪರ್ಕ ಕಲ್ಪಿಸುವ ಯೋಜನೆಯನ್ನು 2020ರ ಅಕ್ಟೋಬರ್‌ನಲ್ಲಿ ಆರಂಭಿಸಲಾಗಿತ್ತು. ಆದರೆ ಆ ವೇಳೆಗೆ ಶೇ.40ರಷ್ಟುಶಾಲೆಗಳಲ್ಲಿ ಈ ವ್ಯವಸ್ಥೆಗಳು ಇದ್ದವು. ಈ ಯೋಜನೆ ಆರಂಭಕ್ಕೂ ಮೊದಲೇ 4.1ಲಕ್ಷ ಶಾಲೆಗಳು ನೀರಿನ ಸೌಲಭ್ಯ ಹೊಂದಿದ್ದವು. ಯೋಜನೆಯ ನಂತರ 6.3 ಲಕ್ಷ ಶಾಲೆಗಳು ಪ್ರಯೋಜನ ಪಡೆದಿವೆ.

ಕಳೆದ ಮಾಚ್‌ರ್‍ನಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ನಲ್ಲಿ ನೀರಿನ ಪ್ರಯೋಜನ ಒದಗಿಸುವುದು ಅನಿವಾರ್ಯ ಎಂದು ಸರ್ಕಾರ, ಈ ಯೋಜನೆಯನ್ನು ಮಾಚ್‌ರ್‍ 31ರವರೆಗೂ ವಿಸ್ತರಿಸಿತ್ತು. ಅದಾಗಿ 4 ತಿಂಗಳು ಕಳೆದಿದ್ದರೂ ಸಹಾ ಜಲ ಜೀವನ್‌ ಮಿಶನ್‌ ತನ್ನ ಗುರಿ ತಲುಪಲು ಸಾಧ್ಯವಾಗಿಲ್ಲ. 50 ಸಾವಿರ ಶಾಲೆಗಳಿಗೆ ಮತ್ತು 40 ಸಾವಿರ ಅಂಗನವಾಡಿಗಳಿಗೆ ಮಾತ್ರ ಸೌಲಭ್ಯವನ್ನು ಹೆಚ್ಚಿಸಿದೆ.

ಯೋಜನೆಯ ಜಾರಿಯಲ್ಲಿ ಹಲವು ರಾಜ್ಯಗಳು ಅಸಮಾನೆಗೆ ಗುರಿಯಾಗಿವೆ. 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ.100ರಷ್ಟುಸೌಲಭ್ಯಗಳನ್ನು ಪಡೆದಿವೆ. ಪಶ್ಚಿಮ ಬಂಗಾಳದಲ್ಲಿ ಸೌಲಭ್ಯ ಪಡೆದ ಶಾಲೆಗಳ ಸಂಖ್ಯೆ ಶೇ.15ಕ್ಕಿಂತ ಕಡಿಮೆ ಹಾಗೂ ಅಂಗನವಾಡಿಗಳ ಸಂಖ್ಯೆ ಶೇ.10ಕ್ಕಿಂತ ಕಡಿಮೆ ಇದೆ. ಉತ್ತರ ಪ್ರದೇಶದಲ್ಲಿ ಯೋಜನೆಗಿಂತ ಮೊದಲು 13,400 ಶಾಲೆಗಳು ಸೌಲಭ್ಯವನ್ನು ಪಡೆದಿದ್ದವು ಈಗ ಅವುಗಳ ಸಂಖ್ಯೆ 1 ಲಕ್ಷವನ್ನು ಮೀರಿದೆ.