ಚಂಡೀಗಢ(ಜ.31): ಜನವರಿ 26ರಂದು ದಿಲ್ಲಿಯಲ್ಲಿ ನಡೆದ ಕಿಸಾನ್‌ ಟ್ರ್ಯಾಕ್ಟರ್‌ ಪರೇಡ್‌ನಲ್ಲಿ ಭಾಗವಹಿಸಿದ್ದ ರೈತರ ಪೈಕಿ ಪಂಜಾಬ್‌ನ ಹಲವು ಭಾಗಗಳ ನೂರಕ್ಕೂ ಹೆಚ್ಚು ಅನ್ನದಾತರ ಸುಳಿವೇ ಪತ್ತೆಯಾಗಿಲ್ಲ ಎಂದು ಸರ್ಕಾರೇತರ ಸಂಸ್ಥೆಯೊಂದು (ಎನ್‌ಜಿಒ) ದೂರಿದೆ.

ಗಣರಾಜ್ಯೋತ್ಸವದ ಟ್ರ್ಯಾಕ್ಟರ್‌ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರ ಪೈಕಿ 100ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದು, ಈ ಪೈಕಿ 12 ರೈತರು ಮೋಗಾ ಜಿಲ್ಲೆಯ ತಟರೀವಾಲಾ ಗ್ರಾಮದವರು ಎಂದು ಪಂಜಾಬ್‌ ಮಾನವ ಹಕ್ಕುಗಳ ಸಂಸ್ಥೆ ಹೇಳಿದೆ. ಕೆಂಪುಕೋಟೆಯಲ್ಲಿ ಸಂಭವಿಸಿದ ಹಿಂಸಾಚಾರ ಸಂಬಂಧ ದಿಲ್ಲಿ ಪೊಲೀಸರು 18 ಮಂದಿಯನ್ನು ಬಂಧಿಸಿದ್ದಾರೆ. ಆದರೆ ಉಳಿದವರು ಪೊಲೀಸರಿಂದ ಬಂಧಿತರಾಗಿದ್ದಾರೆಯೇ ಅಥವಾ ಇನ್ನೇನಾದರೂ ಆಗಿದೆಯೇ ಎಂಬುದು ಗೊತ್ತಾಗುತ್ತಿಲ್ಲ ಎಂದು ಎನ್‌ಜಿಒ ಹೇಳಿದೆ.

ಕೆಂಪುಕೋಟೆ ಗಲಭೆಯಲ್ಲಿ ಆರೋಪಿಗಳಾಗಿರುವವರಿಗೆ ಪಂಜಾಬ್‌ ಮಾನವ ಹಕ್ಕುಗಳ ಸಂಸ್ಥೆಯಷ್ಟೇ ಅಲ್ಲದೆ ದೆಹಲಿ ಸಿಖ್‌ ಗುರುದ್ವಾರ ವ್ಯವಸ್ಥಾಪಕ ಸಮಿತಿ, ಖಾಲ್ರಾ ಮಿಷನ್‌, ಪಂಥಿ ತಲ್ಮೇಲ್‌ ಸಂಘಟನೆಗಳು ಉಚಿತ ಕಾನೂನು ನೆರವು ನೀಡುವುದಾಗಿ ಘೋಷಣೆ ಮಾಡಿವೆ.