ದಾನಿಶ್ ಅಲಿ ಉಗ್ರ: ಬಿಎಸ್‌ಪಿ ಸಂಸದನ ವಿರುದ್ಧ ಲೋಕಸಭೆಯಲ್ಲೇ ಬಿಜೆಪಿ ಸಂಸದನ ಕೀಳು ಹೇಳಿಕೆ
ದಾನಿಶ್ ಅಲಿಯನ್ನು ಉದ್ದೇಶಿಸಿ ಬಿಧೂರಿ ಅವರು, ‘ಏ ಉಗ್ರವಾದಿ.. ನಾನು ಮಾತಾಡುವಾಗ ಬಾಯಿ ಹಾಕಬೇಡ. ಇವನೊಬ್ಬ ಮುಲ್ಲಾ ಆತಂಕವಾದಿ. ಮುಲ್ಲಾ ಉಗ್ರವಾದಿ. ಭಡವಾ’ ಎಂದು ವಾಚಾಮಗೋಚರ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆ ಬಿಜೆಪಿ ಅವರಿಗೆ ಶೋಕಾಸ್ ನೋಟಿಸ್ ವಿಧಿಸಿದೆ.

ನವದೆಹಲಿ (ಸೆಪ್ಟೆಂಬರ್ 23, 2023): ಬಿಎಸ್‌ಪಿ ಸಂಸದ ದಾನಿಶ್ ಅಲಿ ಅವರನ್ನು ದಕ್ಷಿಣ ದಿಲ್ಲಿ ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರು ಲೋಕಸಭೆಯಲ್ಲೇ ‘ಉಗ್ರವಾದಿ’ ಎಂದು ನಿಂದಿಸಿ ಹಾಗೂ ಇತರ ಕೆಲವು ಅವಾಚ್ಯ ಶಬ್ದಗಳಿಂದ ಬೈದು ವಿವಾದ ಸೃಷ್ಟಿಸಿದ್ದಾರೆ. ಇದಕ್ಕೆ ಪ್ರತಿಪಕ್ಷಗಳು ಹಾಗೂ ದಾನಿಶ್ ಅಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಂಥ ತುಚ್ಛ ಪದಗಳಿಂದ ಲೋಕಸಭೆಯ ಇತಿಹಾಸದಲ್ಲೇ ಯಾರೂ ನಿಂದಿಸಿರಲಿಲ್ಲ. ಬಿಧೂರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.
ಇದರ ಬೆನ್ನಲ್ಲೇ ಲೋಕಸಭೆಯ ಉಪನಾಯಕ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೂ ‘ಇಂಥ ಮಾತುಗಳನ್ನು ಭವಿಷ್ಯದಲ್ಲಿ ಆಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದು, ಆ ಮಾತುಗಳನ್ನು ಕಡತದಿಂದ ತೆಗೆದು ಹಾಕಿದ್ದಾಗಿ ಹೇಳಿದ್ದಾರೆ. ಇನ್ನು ವಿಪಕ್ಷಗಳ ಆಕ್ರೋಶ ಹೆಚ್ಚಾಗುತ್ತಿದ್ದಂತೆಯೇ ಬಿಧೂರಿ ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್ ನೀಡಿದ್ದು, ‘ಏಕೆ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬಾರದು?’ ಎಂದು ಪ್ರಶ್ನಿಸಿ 15 ದಿನದಲ್ಲಿ ಉತ್ತರಿಸಲು ಸೂಚಿಸಿದೆ.
ಇದನ್ನು ಓದಿ: ಲೋಕಸಭೆಯಲ್ಲಿ ಮಂಡನೆಯಾಯ್ತು ಮಹಿಳಾ ಮೀಸಲಾತಿ ಮಸೂದೆ: ದೇವರು ನನಗೆ ಅವಕಾಶ ಕೊಟ್ಟಿದ್ದಾರೆ ಎಂದ ಪ್ರಧಾನಿ ಮೋದಿ
ಆಗಿದ್ದೇನು?:
ಗುರುವಾರ ಲೋಕಸಭೆಯ ವಿಶೇಷ ಅಧಿವೇಶನದ ವೇಳೆ ಚಂದ್ರಯಾನ-3 ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವ ಕಲಾಪ ನಡೆದಿತ್ತು. ಈ ವೇಳೆ ಬಿಎಸ್ಪಿ ಸಂಸದ ದಾನಿಶ್ ಅಲಿ ಮಾತನಾಡಿ, ‘ಚಂದ್ರಯಾನ ಯಶಸ್ಸಿಗೆ ಕಾರಣವಾದ ಇಸ್ರೋ ಸಂಸ್ಥೆಯ ಅಭ್ಯುದಯಕ್ಕೆ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಇಂದಿನ ಪ್ರಧಾನಿ ನರೇಂದ್ರ ಮೋದಿವರೆಗೂ ಎಲ್ಲ ಪ್ರಧಾನಿಗಳೂ ದುಡಿದಿದ್ದಾರೆ. ಹಿಂದಿನ ಪ್ರಧಾನಿಗಳು ಪಟ್ಟ ಶ್ರಮದ ಕೀರ್ತಿ ಮೋದಿ ಅವರು ಪಡೆಯುತ್ತಿದ್ದು, ಅವರು ಅದೃಷ್ಟವಂತರು’ ಎಂದು ವ್ಯಂಗ್ಯವಾಗಿ ಹೇಳಿದರು.
ನಂತರ ಮಾತನಾಡಿದ ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರು ದಾನಿಶ್ ಅಲಿ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿ, ‘ಮೋದಿ ಅವರು ಇಸ್ರೋ ಯಶಸ್ಸಿನ ಶ್ರೇಯ ಪಡೆಯುತ್ತಿದ್ದಾರೆ ಎಂಬ ದಾನಿಶ್ ಅಲಿ ಆರೋಪ ಸರಿಯಲ್ಲ. ವಿಜ್ಞಾನಿಗಳು ಶ್ರೇಯಸ್ಸು ಪಡೆಯುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು. ಈ ವೇಳೆ ಅಲಿಗೂ ಬಿಧೂರಿಗೂ ವಾಕ್ಸಮರ ಏರ್ಪಟ್ಟಿತು.
ಇದನ್ನೂ ಓದಿ: ಇನ್ನೂ ಸಂದೇಶ ಕಳುಹಿಸದ ವಿಕ್ರಂ, ಪ್ರಜ್ಞಾನ್: ಚಂದ್ರನ ಮೇಲಿರುವ ಲ್ಯಾಂಡರ್, ರೋವರ್ ಎಬ್ಬಿಸಲು ಇಂದು ಇಸ್ರೋ ಯತ್ನ
ಆಗ ಮಾತಿನ ಭರದಲ್ಲಿ ದಾನಿಶ್ ಅಲಿಯನ್ನು ಉದ್ದೇಶಿಸಿ ಬಿಧೂರಿ ಅವರು, ‘ಏ ಉಗ್ರವಾದಿ.. ನಾನು ಮಾತಾಡುವಾಗ ಬಾಯಿ ಹಾಕಬೇಡ. ಇವನೊಬ್ಬ ಮುಲ್ಲಾ ಆತಂಕವಾದಿ. ಮುಲ್ಲಾ ಉಗ್ರವಾದಿ. ಭಡವಾ’ ಎಂದು ವಾಚಾಮಗೋಚರ ವಾಗ್ದಾಳಿ ನಡೆಸಿದರು.
ಸಂಸದ ಹುದ್ದೆಗೆ ರಾಜೀನಾಮೆ: ಅಲಿ ಕಣ್ಣೀರು
ಬಿಧೂರಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ದಾನಿಶ್ ಅಲಿ ‘ಬಿಧೂರಿ ಆಡಿದ ಮಾತಿನಿಂದ ರಾತ್ರಿ ಇಡೀ ನಿದ್ದೆ ಬಂದಿಲ್ಲ. ನನ್ನ ಮೇಲೇ ಹೀಗೆ ಅವರು ಆರೋಪ ಮಾಡಿದರೆ, ಜನಸಾಮಾನ್ಯ ಮುಸ್ಲಿಮರ ಪಾಡೇನು? ಬಿಧೂರಿ ಮೇಲೆ ಕಠಿಣ ಕ್ರಮ ಕೈಗೊಳ್ಳದೇ ಇದ್ದರೆ ಲೋಕಸಭೆಗೆ ರಾಜೀನಾಮೆ ನೀಡುವೆ’ ಎಂದು ಕಣ್ಣೀರು ಹಾಕಿದ್ದಾರೆ.
ನಗುತ್ತಿದ್ದ ಹರ್ಷವರ್ಧನ್: ವಿವಾದ
ಲೋಕಸಭೆಯಲ್ಲಿ ಬಿಧೂರಿ ಪಕ್ಕದಲ್ಲೇ ಕೂತಿದ್ದ ಇನ್ನೊಬ್ಬ ಬಿಜೆಪಿ ಸಂಸದ ಡಾ। ಹರ್ಷವರ್ಧನ್ ಅವರು ಬಿಧೂರಿ ವಾಚಾಮಗೋಚರವಾಗಿ ವಾಗ್ದಾಳಿ ನಡೆಸುತ್ತಿದ್ದರೂ ನಗುತ್ತ ಕೂತಿದ್ದರು. ಈ ವಿಡಿಯೋ ವೈರಲ್ ಆಗಿದೆ.
ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಹರ್ಷವರ್ಧನ್, ‘ಬಿಧೂರಿ ಮಾತನಾಡುವಾಗ ಸದನದಲ್ಲಿ ಭಾರಿ ಕೋಲಾಹಲ ಸೃಷ್ಟಿ ಆಗಿತ್ತು. ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಕೇಳುತ್ತಿರಲಿಲ್ಲ ವಿಪಕ್ಷಗಳ ಸದಸ್ಯರು ನಮ್ ವಿರುದ್ಧ ಮಾಡುತ್ತಿದ್ದ ಆರೋಪ ಕೇಳಿ ನಗು ಬರುತ್ತಿತ್ತು. ನಗುತ್ತಿದ್ದೆ ಅಷ್ಟೇ’ ಎಂದು ಸ್ಪಷ್ಟಪಡಿಸಿದ್ದಾರೆ.