ಬೆಂಗಳೂರು(ಫೆ.25): ರಾಜ್ಯ ಸರ್ಕಾರಿ ನೌಕರರ ಹಿತಕಾಯುವ ಬದ್ಧತೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇನ್ನುಮುಂದೆ ಸರ್ಕಾರಿ ನೌಕರರ ವಿರುದ್ಧ ದೂರು ನೀಡುವ ದೂರುದಾರರ ಹೆಸರು ಮತ್ತು ವಿಳಾಸವನ್ನು ಖಚಿತಪಡಿಸಿಕೊಂಡು, ಅಗತ್ಯ ಪೂರಕ ದಾಖಲೆಗಳನ್ನು ಒದಗಿಸಿದ ಬಳಿಕವಷ್ಟೇ ಪ್ರಾಥಮಿಕ ತನಿಖೆಗೆ ಪರಿಗಣಿಸುವ ತೀರ್ಮಾನ ಕೈಗೊಂಡಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಸರ್ಕಾರಿ ನೌಕರರ ವಿರುದ್ಧ ದೂರುದಾರರ ಆರೋಪವು ದಾಖಲೆಗಳಿಗೆ ಪೂರಕವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದರೆ ವಿಚಾರಣೆಗೆ ಪರಿಗಣಿಸಬಹುದು ಎಂದು ಸೂಕ್ತ ಆದೇಶ ಹೊರಡಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ರಾಜ್ಯದ ಸರ್ಕಾರಿ ಅಧಿಕಾರಿ/ನೌಕರರು ಮುಕ್ತ ಮತ್ತು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಹಾಗೂ ಆಡಳಿತ ವ್ಯವಸ್ಥೆಯಲ್ಲಿನ ಕಾನೂನಿನ ದುರುಪಯೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಸರ್ಕಾರಿ ಅಧಿಕಾರಿ/ನೌಕರರ ವಿರುದ್ಧ ಅನಾಮಧೇಯ ದೂರುಗಳನ್ನು ತನಿಖೆಗೆ ಒಳಪಡಿಸದಿರಲು ಕೇಂದ್ರದ ಮಾದರಿಯಲ್ಲಿ ರಾಜ್ಯವು ಸುತ್ತೋಲೆ ಹೊರಡಿಸಿದೆ. ಆದರೆ, ಈ ಸುತ್ತೋಲೆಯನ್ನು ಹಲವರು ದುರುಪಯೋಗಪಡಿಸಿಕೊಂಡು ನಕಲಿ ಹೆಸರು ಮತ್ತು ವಿಳಾಸವನ್ನು ಬಳಸಿಕೊಂಡು ಅಧಿಕಾರಿಗಳ/ನೌಕರರ ವಿರುದ್ಧ ಬೇನಾಮಿ ದೂರುಗಳನ್ನು ನೀಡುತ್ತಿದ್ದಾರೆ. ಇದರಿಂದ ನೌಕರರನ್ನು ವಿಚಾರಣೆಗೊಳಪಡಿಸಲಾಗುತ್ತಿದ್ದು, ದೈನಂದಿನ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಉಂಟಾಗಿ ದಕ್ಷ ಮತ್ತು ಪ್ರಾಮಾಣಿಕ ನೌಕರರಿಗೆ ಧಕ್ಕೆ ಉಂಟಾಗುತ್ತಿದೆ. ಅಲ್ಲದೇ, ಆಡಳಿತಾತ್ಮಕ ಸಮಸ್ಯೆಗಳು ಉದ್ಭವವಾಗಿ ಸರ್ಕಾರಿ ಕೆಲಸಗಳು ಕುಂಠಿತಗೊಳ್ಳುತ್ತಿವೆ. ಇದನ್ನು ತಪ್ಪಿಸಲು ಮುಕ್ತ ಮತ್ತು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕು ಎಂದು ನೌಕರರ ಸಂಘವು ಮನವಿ ಮಾಡಿದೆ.

ಹೀಗಾಗಿ, ಈಗಾಗಲೇ ಹೊರಡಿಸಿರುವ ಸರ್ಕಾರದ ಸುತ್ತೋಲೆಯಲ್ಲಿ ಪೂರ್ಣ ವಿಳಾಸ ಸಹಿತ ಇರುವ ದೂರುಗಳನ್ನು ತನಿಖೆಗೆ/ವಿಚಾರಣೆಗೆ ಪರಿಗಣಿಸುವುದು ಎಂಬುದನ್ನು ಮಾರ್ಪಡಿಸಿ, ದೂರು ನೀಡಿರುವ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ಖಚಿತಪಡಿಸಿಕೊಂಡು ದೂರುದಾರರು ಅಗತ್ಯ ಪೂರಕ ದಾಖಲೆಗಳನ್ನು ಒದಗಿಸಿದ ನಂತರ ದೂರದಾರರ ಆರೋಪವು ಮೇಲ್ನೋಟಕ್ಕೆ ಕಂಡುಬಂದಲ್ಲಿ ಅಂತಹ ದೂರುಗಳನ್ನು ಪ್ರಾಥಮಿಕ ತನಿಖೆಗೆ/ ವಿಚಾರಣೆಗೆ ಪರಿಗಣಿಸುವುದು ಎಂದು ಸೂಕ್ತ ಹೊರಡಿಸಬೇಕು ಎಂದು ತಿಳಿಸಿದ್ದಾರೆ.

ಏಕೆ ಹೊಸ ನಿಯಮ?

ನಕಲಿ ಹೆಸರು ಮತ್ತು ವಿಳಾಸ ಬಳಸಿಕೊಂಡು ನೌಕರರ ವಿರುದ್ಧ ಅನೇಕರು ಬೇನಾಮಿ ದೂರು ನೀಡುತ್ತಿದ್ದಾರೆ. ಅದನ್ನು ಸ್ವೀಕರಿಸಿ ನೌಕರರ ವಿಚಾರಣೆ ನಡೆಸಲಾಗುತ್ತದೆ. ಇದರಿಂದ ದಕ್ಷ ಮತ್ತು ಪ್ರಾಮಾಣಿಕ ನೌಕರರಿಗೆ ಧಕ್ಕೆ ಉಂಟಾಗುತ್ತಿದೆ. ಆಡಳಿತಾತ್ಮಕ ಸಮಸ್ಯೆಗಳೂ ಉದ್ಭವವಾಗಿ ಸರ್ಕಾರಿ ಕೆಲಸಗಳು ಕುಂಠಿತಗೊಳ್ಳುತ್ತಿವೆ. ಇದನ್ನು ತಪ್ಪಿಸಬೇಕು ಎಂದು ಸರ್ಕಾರಿ ನೌಕರರ ಸಂಘ ಮನವಿ ಮಾಡಿತ್ತು.