Asianet Suvarna News Asianet Suvarna News

ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್‌ ಆಳ್ವ ನಾಮಪತ್ರ

 ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಸರ್ವಸಮ್ಮತ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಹಿರಿಯ ಕಾಂಗ್ರೆಸ್‌ ನಾಯಕಿ, ಕನ್ನಡತಿ ಮಾರ್ಗರೆಟ್‌ ಆಳ್ವ, ಮಂಗಳವಾರ ಇಲ್ಲಿ ನಾಮಪತ್ರ ಸಲ್ಲಿಸಿದರು

Opposition vice presidential candidate Margaret Alva files nomination papers pod
Author
Bangalore, First Published Jul 20, 2022, 8:42 AM IST

ನವದೆಹಲಿ(ಜು.20): ಆ.6ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಸರ್ವಸಮ್ಮತ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಹಿರಿಯ ಕಾಂಗ್ರೆಸ್‌ ನಾಯಕಿ, ಕನ್ನಡತಿ ಮಾರ್ಗರೆಟ್‌ ಆಳ್ವ, ಮಂಗಳವಾರ ಇಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಧೀರ್‌ ರಂಜನ್‌ ಚೌಧರಿ, ಶಿವಸೇನೆಯ ಸಂಜಯ್‌ ರಾವುತ್‌, ಎನ್‌ಸಿಪಿಯ ಶರದ್‌ ಪವಾರ್‌ ಹಾಗೂ ಸಮಾಜವಾದಿ, ಸಿಪಿಎಂ, ಸಿಪಿಐ, ಎಂಡಿಎಂಕೆ ಮೊದಲಾದ ಪಕ್ಷಗಳ ನಾಯಕರು ಉಪಸ್ಥಿತರಿದ್ದರು. ಆದರೆ ಟಿಎಂಸಿ ಮತ್ತು ಆಪ್‌ ನಾಯಕರ ಗೈರು ಎದ್ದು ಕಾಣುತ್ತಿತ್ತು.

ಹಾಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಅವಧಿ ಆ.10ಕ್ಕೆ ಮುಕ್ತಾಯಗೊಳ್ಳಲಿದ್ದು, ಅವರ ಸ್ಥಾನಕ್ಕಾಗಿ ಇದೀಗ ಚುನಾವಣೆ ನಡೆಯುತ್ತಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಜಗದೀಪ್‌ ಧನಕರ್‌ ಸ್ಪರ್ಧಿಸಿದ್ದು, ಅವರ ವಿರುದ್ಧ ಆಳ್ವ ಕಣಕ್ಕೆ ಇಳಿದಿದ್ದಾರೆ. ಹಾಲಿ ಮತಗಳ ಬಲಾಬಲದ ಅನ್ವಯ ಧನಕರ್‌ ಗೆಲುವು ನಿಶ್ಚಿತವಾಗಿದೆ. ಆ.6ರಂದು ಚುನಾವಣೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ. ನೂತನ ಉಪರಾಷ್ಟ್ರಪತಿ ಆ.11ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನಾನು ಹೆದರಿಲ್ಲ:

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಮಾರ್ಗರೆಟ್‌ ಆಳ್ವ, ‘ಚುನಾವಣೆಯಲ್ಲಿ ಸ್ಪರ್ಧಿಸಲು ನಾನು ಹೆದರಿಕೊಂಡಿಲ್ಲ. ಏಕೆಂದರೆ ಸೋಲು, ಗೆಲುವು ಜೀವನದ ಅವಿಭಾಜ್ಯ ಅಂಗ. ಆದರೆ ವಿವಿಧ ಪಕ್ಷಗಳ ನಾಯಕರು ನನ್ನ ಮೇಲೆ ಇರಿಸಿದ ವಿಶ್ವಾಸ, ಏಕೀಕೃತ ಭಾರತ ನಿರ್ಮಾಣದಲ್ಲಿ ಎಲ್ಲಾ ಜನರನ್ನು ಒಂದುಗೂಡಿಸಲು ನೆರವಾಗಲಿದೆ. ನಾವು ಈ ಅದ್ಭುತ ದೇಶದ ಮೂಲೆಮೂಲೆಗಳಿಂದ ಬಂದಿದ್ದೇವೆ ಮತ್ತು ವಿವಿಧ ಧರ್ಮ, ಆಚರಣೆಗಳನ್ನು ಪಾಲಿಸುತ್ತಿದ್ದೇವೆ. ವೈವಿಧ್ಯತೆಯಲ್ಲಿ ಏಕತೆಯೇ ನಮ್ಮ ಶಕ್ತಿ. ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನು ಬಲಪಡಿಸಲು, ನಮ್ಮ ಸಾಂಸ್ಥಿಕ ಸಂಸ್ಥೆಗಳನ್ನು ಬಲಪಡಿಸಲು, ನಮ್ಮಲ್ಲಿನ ಪ್ರತಿಯೊಬ್ಬರಿಗೂ ಸೇರಿದ ಸಾರೇ ಜಹಾ ಸೇ ಅಚ್ಛೇ ಎಂಬ ದೇಶಕ್ಕಾಗಿ ನಾವು ಈ ಸ್ಪರ್ಧೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಪ್ರತಿಪಕ್ಷಗಳೆಲ್ಲಾ ಒಗ್ಗೂಡಿದರೆ ಮಾರ್ಗರೆಟ್‌ ಆಳ್ವ ಜಯ: ಸಿದ್ದು

ಪ್ರತಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್‌ ಆಳ್ವ ಅವರನ್ನು ಗೆಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ. ಪ್ರತಿಪಕ್ಷಗಳೆಲ್ಲವೂ ಒಟ್ಟಾಗಿ ಮತ ಹಾಕಿದರೆ ಶೇ.30ರಷ್ಟಿರುವ ಬಿಜೆಪಿಯ ಅಭ್ಯರ್ಥಿ ಗೆಲ್ಲಲು ಸಾಧ್ಯವೇ ಇಲ್ಲ. ಆದರೆ, ಜೆಡಿಎಸ್‌ ಸೇರಿ ಹಲವರು ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಮಾರ್ಗರೇಟ್‌ ಆಳ್ವ ಅವರನ್ನು ಹರಕೆಯ ಕುರಿ ಎಂದ ಬಿಜೆಪಿ ನಾಯಕರ ಹೇಳಿಕೆಗೆ ಕಿಡಿ ಕಾರಿದ ಅವರು, ಹರಕೆಯ ಕುರಿ ಎನ್ನುವುದು ಬಿಜೆಪಿಯ ವಿಕೃತಿ ತೋರಿಸುತ್ತದೆ. ಬಹಳ ವರ್ಷ ಬಿಜೆಪಿ ಅಭ್ಯರ್ಥಿಗಳು ಗೆದ್ದಿರಲಿಲ್ಲ. ಆಗ ಅವರನ್ನು ಹರಕೆ ಕುರಿ ಮಾಡಿದ್ದಾ? ಎಂದು ಪ್ರಶ್ನಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಗರೇಟ್‌ ಆಳ್ವ ಅವರು ಒಬ್ಬ ಅನುಭವಿ ರಾಜಕಾರಣಿ. ರಾಜ್ಯಸಭೆ, ಲೋಕಸಭೆ ಸದಸ್ಯರಾಗಿದ್ದರು. ಕೇಂದ್ರದ ಮಂತ್ರಿ ಹಾಗೂ ಮೂರು-ನಾಲ್ಕು ರಾಜ್ಯಗಳಿಗೆ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಇವರನ್ನು ಶರದ್‌ ಪವಾರ್‌ ಅವರು ವಿರೋಧ ಪಕ್ಷಗಳ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ವಿರೋಧಪಕ್ಷಗಳೆಲ್ಲಾ ಒಟ್ಟಾಗಿ ಮತ ಹಾಕಿದರೆ ಭಾರಿ ಅಂತರದಿಂದ ಗೆಲುವು ಸಾಧಿಸುತ್ತಾರೆ. ಆದರೆ ಜೆಡಿಎಸ್‌, ನವೀನ್‌ ಪಟ್ನಾಯಕ್‌, ಎಐಎಡಿಎಂಕೆ, ಉದ್ಧವ್‌ ಠಾಕ್ರೆ ಎಲ್ಲಾ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಜೆಡಿಎಸ್‌ನವರು ಜಾತ್ಯತೀತ ಪಕ್ಷ ಎನ್ನುತ್ತಾರೆ. ಆದರೆ ಬಿಜೆಪಿಯವರಿಗೆ ಬೆಂಬಲ ನೀಡುತ್ತಾರೆ. ಆದ್ದರಿಂದ ನೀವು ದೇವೇಗೌಡರನ್ನೇ ಈ ಬಗ್ಗೆ ಕೇಳಬೇಕು. ದೇವೇಗೌಡರು ಮಮತಾ ಬ್ಯಾನರ್ಜಿ ಅವರು ಕರೆದಿದ್ದ ಸಭೆಗೂ ಹೋಗಿದ್ದರು, ಅಲ್ಲಿಂದ ಬಂದಮೇಲೆ ಬದಲಾವಣೆ ಮಾಡಿಕೊಂಡಿದ್ದಾರೆ. ಏಕೆ ಎಂಬುದನ್ನು ಕೇಳಿ ಎಂದು ಸುದ್ದಿಗಾರರಿಗೆ ತಿಳಿಸಿದರು.

Follow Us:
Download App:
  • android
  • ios