ಮುರ್ಮು ಪ್ರಮಾಣ ವಚನ ವೇಳೆ ಖರ್ಗೆಗೆ ಅವಮಾನ ಆರೋಪ ವಿಪಕ್ಷಗಳ ಆಕ್ರೋಶ.ರಾಜ್ಯಸಭೆ ಸಭಾಪತಿಗೆ ವಿಪಕ್ಷಗಳ ಪತ್ರ . ಸಚಿವ ಸೋನೊವಾಲ್‌ ಪಕ್ಕದಲ್ಲಿ ಕೂತಿದ್ದ ಖರ್ಗೆ. ಮೋದಿಗಿಂತ ದೂರದಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು.

ನವದೆಹಲಿ (ಜು.25): ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಡಲಾಗಿದ್ದ ಆಸನ ವ್ಯವಸ್ಥೆ ಬಗ್ಗೆ ವಿವಾದ ಸೃಷ್ಟಿಯಾಗಿದೆ. ‘ಖರ್ಗೆ ಅವರು ವಿಪಕ್ಷ ನಾಯಕ. ಸ್ಥಾನಮಾನಕ್ಕೆ ಅನುಗುಣವಾದ ಆಸನ ವ್ಯವಸ್ಥೆಯನ್ನು ಅವರಿಗೆ ಮಾಡಿರಲಿಲ್ಲ. ಅವಮಾನ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಲಾಗಿತ್ತು’ ಎಂದು ರಾಜ್ಯಸಭೆ ಸಭಾಪತಿಗೆ ಕಾಂಗ್ರೆಸ್‌, ಟಿಎಂಸಿ ಹಾಗೂ ಇತರ ವಿಪಕ್ಷಗಳು ಜಂಟಿ ದೂರು ನೀಡಿದೆ. ದ್ರೌಪದಿ ಅವರು ಪ್ರಮಾಣವಚನ ಸ್ವೀಕರಿಸುವ ವೇಳೆ ಖರ್ಗೆ ಮೊದಲ ಸಾಲಿನಲ್ಲೇ ಆಸೀನರಾಗಿದ್ದರು. ಅವರ ಬಳಿ ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್‌ ಕೂತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖರ್ಗೆ ಅವರಿಗಿಂತ ತುಂಬಾ ದೂರದಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ಆಕ್ಷೇಪಿಸಿ ರಾಜ್ಯಸಭೆ ಸಭಾಪತಿಗೆ ಪತ್ರ ಬರೆದಿರುವ ವಿಪಕ್ಷಗಳ ಸಂಸದರು, ‘ಸ್ಥಾನಮಾನಕ್ಕೆ ತಕ್ಕುದಾದ ಆಸನವನ್ನು ಖರ್ಗೆ ಅವರಿಗೆ ನೀಡಿರಲಿಲ್ಲ. ಇದರಿಂದ ನಮಗೆ ಆಘಾತವಾಗಿದೆ. ಇದು ಶಿಷ್ಟಾಚಾರಕ್ಕೆ ವಿರುದ್ಧವಾದ್ದು ಹಾಗೂ ಬೇಕೆಂದೇ ಅವಮಾನ ಮಾಡಲು ಮಾಡಿರುವಂಥದ್ದು. ಹೀಗಾಗಿ ಈ ಪತ್ರ ಬರೆಯುತ್ತಿದ್ದೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ 2ನೇ ಮಹಿಳಾ ರಾಷ್ಟ್ರಪತಿ: ಒಡಿಶಾದ ಆದಿವಾಸಿ ನಾಯಕಿ ದ್ರೌಪದಿ ಮುರ್ಮು ಅವರು, ದೇಶದ 15ನೇ ರಾಷ್ಟ್ರಪತಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು. ಇದರೊಂದಿಗೆ ಇತ್ತೀಚೆಗಷ್ಟೇ ನಡೆದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಭಾರಿ ಬಹುಮತದಿಂದ ಜಯಭೇರಿ ಬಾರಿಸಿದ ದ್ರೌಪದಿ ಅವರ 5 ವರ್ಷದ ಅಧಿಕಾರಾವಧಿ ಈಗ ಅಧಿಕೃತವಾಗಿ ಆರಂಭವಾದಂತಾಗಿದೆ.

ಸಂಥಾಲ್‌ ಸಮುದಾಯಕ್ಕೆ ಸೇರಿದ 64 ವರ್ಷದ ದ್ರೌಪದಿ, ‘ದೇಶದ ಮೊದಲ ಆದಿವಾಸಿ ರಾಷ್ಟ್ರಪತಿ’ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಜತೆಗೆ 2ನೇ ಮಹಿಳಾ ರಾಷ್ಟ್ರಪತಿ ಹಾಗೂ ಅತಿ ಕಿರಿಯ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದ್ದಾರೆ. ಸ್ವಾತಂತ್ರ್ಯಾನಂತರ ಜನಿಸಿದ ವ್ಯಕ್ತಿಯೊಬ್ಬರು ದೇಶದ ರಾಷ್ಟ್ರಪತಿ ಆಗುತ್ತಿರುವುದು ಕೂಡ ಇದೇ ಮೊದಲು.

Scroll to load tweet…

ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಬೆಳಗ್ಗೆ 10.15ಕ್ಕೆ ದ್ರೌಪದಿ ಅವರು ಪ್ರಮಾಣವಚನ ಸ್ವೀಕರಿಸಿದರು. ಭಾರತದ ಮುಖ್ಯ ನ್ಯಾಯಾಧೀಶ ನ್ಯಾ. ಎನ್‌.ವಿ. ರಮಣ ಪ್ರಮಾಣವಚನ ಬೋಧಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ರಾಯಭಾರಿಗಳು, ಸಂಸದರು, ಸೇನಾ ಮುಖ್ಯಸ್ಥರು ಹಾಗೂ ವಿವಿಧ ಗಣ್ಯರು ಸಾಕ್ಷಿಯಾದರು.

ಭಾರತದ ಮೊಟ್ಟಮೊದಲ ಆದಿವಾಸಿ ರಾಷ್ಟ್ರಪತಿ ಪದಗ್ರಹಣದ ಆಕರ್ಷಕ ಚಿತ್ರಗಳು

ಬಳಿಕ ಭಾಷಣ ಮಾಡಿದ ದೌಪದಿ, ‘ಇಂದಿನ ನನ್ನ ಗೆಲುವು ಕೇವಲ ನನ್ನ ವೈಯಕ್ತಿಕ ಗೆಲುವಲ್ಲ. ದೇಶದ ಪ್ರತಿಯೊಬ್ಬ ಬಡವರ ಸಾಧನೆ. ಬಡ ಭಾರತೀಯರ ಕನಸುಗಳು ಕನಸಾಗಿ ಉಳಿಯುವುದಿಲ್ಲ. ನನಸು ಕೂಡ ಆಗುತ್ತವೆ ಎಂಬುದಕ್ಕೆ ನನ್ನ ಆಯ್ಕೆಯೇ ಸಾಕ್ಷಿ. ಎಲ್ಲರ ಪ್ರಯತ್ನ ಹಾಗೂ ಎಲ್ಲರ ಕರ್ತವ್ಯ- ಈ ಎರಡು ಹಳಿಗಳ ಮೇಲೆ ದೇಶ ಇನ್ನು ಮುನ್ನುಗ್ಗಬೇಕು. ಅಂದರೆ ಜನರು ಕರ್ತವ್ಯ ನಿಭಾವಣೆ ಜತೆ, ತಮ್ಮ ಸ್ವಂತ ಪ್ರಯತ್ನದ ಮೂಲಕವೂ ದೇಶವನ್ನು ಮುನ್ನಡೆಸಬೇಕು’ ಎಂದು ಕರೆ ನೀಡಿದರು.

ದ್ರೌಪದಿ ನನ್ನ ಮೂಲ ಹೆಸರಲ್ಲ, ನೂತನ ರಾಷ್ಟ್ರಪತಿಯ ಮೊದಲ ಹೆಸರು ಬಹಿರಂಗ!

ಇದಕ್ಕೂ ಮೊದಲು ರಾಷ್ಟ್ರಪತಿ ಭವನದಿಂದ ಅಶ್ವದಳದ ಮೆರವಣಿಗೆಯಲ್ಲಿ ದ್ರೌಪದಿ ಮುರ್ಮು ಹಾಗೂ ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಸಂಸತ್ತಿನ ಸೆಂಟ್ರಲ್‌ ಹಾಲ್‌ಗೆ ಆಗಮಿಸಿದರು. ಪ್ರಮಾಣವಚನ ಸ್ವೀಕರಿಸುವ ಮೊದಲು 21 ಕುಶಾಲತೋಪುಗಳನ್ನು ಹಾರಿಸಿ ಗನ್‌ ಸಲ್ಯೂಟ್‌ ನೀಡಲಾಯಿತು. ಸಮಾರಂಭ ಮುಗಿದ ನಂತರ ದ್ರೌಪದಿ ರಾಷ್ಟ್ರಪತಿ ಭವನಕ್ಕೆ ತೆರದರು. ಅಲ್ಲಿಯೂ ಅವರಿಗೆ ಗೌರವ ವಂದನೆ ನೀಡಿ ಸ್ವಾಗತಿಸಲಾಯಿತು.