ಹೈದರಾಬಾದ್(ಮಾ.25):  ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಜೈಲು ಶಿಕ್ಷೆ ಮುಗಿಸಿ ಮರಳಿರುವ ವಿ.ಕೆ. ಶಶಿಕಲಾ ಅವರು ಅಣ್ಣಾಡಿಎಂಕೆಗೆ ಮರಳಲು ಬಯಸಿದರೆ ಅದನ್ನು ಪರಿಶೀಲಿಸಲು ಮುಕ್ತವಾಗಿರುವುದಾಗಿ ತಮಿಳುನಾಡು ಉಪಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಹೇಳಿದ್ದಾರೆ.

‘ಶಶಿಕಲಾ ಅವರು 4 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. 32 ವರ್ಷಗಳ ಕಾಲ ಅವರು ಅಮ್ಮಾ (ಜಯಲಲಿತಾ) ಜತೆಗಿದ್ದರು. ಅವರ ಸೇವೆ ಮಾಡಿದ್ದರು. ಪಕ್ಷದ ಈಗಿನ ವ್ಯವಸ್ಥೆಯನ್ನು ಒಪ್ಪಿಕೊಂಡರೆ, ಅವರ ವಾಪಸಾತಿಯನ್ನು ಮಾನವೀಯ ನೆಲೆಯಲ್ಲಿ ಪರಿಶೀಲಿಸುತ್ತೇವೆ’ ಎಂದು ಟೀವಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಶಶಿಕಲಾ ನಾಯಕತ್ವ ವಿರೋಧಿಸಿ 2017ರ ಫೆಬ್ರವರಿಯಲ್ಲಿ ಪನ್ನೀರ್‌ಸೆಲ್ವಂ ಅವರು ಜಯಲಲಿತಾ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದ್ದರು. ಇದೀಗ ಅವರ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.