ಇನ್ನು ಮುಂದೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಕಂಪನಿಗಳು ಮಾತ್ರ ಸ್ಲೀಪರ್ ಬಸ್‌ಗಳನ್ನು ನಿರ್ಮಿಸಬಹುದು ಎಂದು ಸರ್ಕಾರ ಆದೇಶಿಸಿದೆ. ಕಳೆದ 6 ತಿಂಗಳಲ್ಲಿ 6 ಅಪಘಾತಗಳು ಸಂಭವಿಸಿ 145 ಜನ ಪ್ರಾಣ ಕಳೆದುಕೊಂಡ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ನವದೆಹಲಿ: ಇನ್ನು ಮುಂದೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಕಂಪನಿಗಳು ಮಾತ್ರ ಸ್ಲೀಪರ್ ಬಸ್‌ಗಳನ್ನು ನಿರ್ಮಿಸಬಹುದು ಎಂದು ಸರ್ಕಾರ ಆದೇಶಿಸಿದೆ. ಕಳೆದ 6 ತಿಂಗಳಲ್ಲಿ 6 ಅಪಘಾತಗಳು ಸಂಭವಿಸಿ 145 ಜನ ಪ್ರಾಣ ಕಳೆದುಕೊಂಡ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಕೇಂದ್ರ ಸರ್ಕಾರದ ಪರವಾನಗಿ ಪಡೆದ ಕಂಪನಿಗಳು
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ನೀಡಿದ ಮಾಹಿತಿ ಪ್ರಕಾರ, ಕೇಂದ್ರ ಸರ್ಕಾರದ ಪರವಾನಗಿ ಪಡೆದ ಕಂಪನಿಗಳು ಅಥವಾ ಸೌಲಭ್ಯಗಳಲ್ಲಿ ಮಾತ್ರ ಸ್ಲೀಪರ್ ಬಸ್‌ಗಳನ್ನು ತಯಾರಿಸಲಾಗುವುದು. ಪ್ರಸ್ತುತ ಇರುವ ಬಸ್‌ಗಳಿಗೆ ಅಗ್ನಿ ಪತ್ತೆ ವ್ಯವಸ್ಥೆ, ತುರ್ತು ನಿರ್ಗಮನ ದ್ವಾರ, ಬೆಳಕು, ಸುತ್ತಿಗೆ, ಚಾಲಕನನ್ನು ಎಚ್ಚರಿಸುವ ಸಾಧನಗಳನ್ನು ಕಡ್ಡಾಯವಾಗಿ ಅಳವಡಿಸಬೇಕಾಗುವುದು.
ಸ್ಲೀಪರ್ ಬಸ್‌ಗಳಲ್ಲಿರುವ ದಹನಶೀಲ ವಸ್ತುಗಳು, ಓಡಾಡಲು ಸಣ್ಣ ಮಾರ್ಗ, ಅಸಮರ್ಪಕ ತುರ್ತು ನಿರ್ಗಮನ ಕಿಟಕಿ, ಅಗ್ನಿ ಸುರಕ್ಷತಾ ಸಾಧನಗಳ ಅಲಭ್ಯತೆಯಂತಹ ಸಮಸ್ಯೆಗಳಿಂದ ಅಪಘಾತಗಳಾದ ಸಂದರ್ಭದಲ್ಲಿ ಪ್ರಯಾಣಿಕರ ಸಾವಿನ ಸಂಖ್ಯೆ ಹೆಚ್ಚುತ್ತದೆ. ಇದನ್ನು ತಡೆಯುವ ಸಲುವಾಗಿ ಕೇಂದ್ರ ಈ ಕ್ರಮ ಕೈಗೊಂಡಿದೆ.
ಅಪಘಾತದ 7 ದಿನ ಉಚಿತ ಚಿಕಿತ್ಸೆ : ಸಾವಿಗೆ 2 ಲಕ್ಷ ರು.
ನವದೆಹಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಇನ್ನುಮುಂದೆ 7 ದಿನಗಳ ವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು ಹಾಗೂ 1.5 ಲಕ್ಷ ರು.ವರೆಗಿನ ಬಿಲ್‌ಅನ್ನು ಸರ್ಕಾರವೇ ಭರಿಸಲಿದೆ. ಅಂತೆಯೇ, ಮೃತರ ಪರಿವಾರಕ್ಕೆ 25,000 ರು. ಬದಲು 2 ಲಕ್ಷ ರು. ಪರಿಹಾರ ಕೊಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.


