ಇಸ್ರೋದ ವಾಣಿಜ್ಯ ಉದ್ದೇಶದ ಭಾರಿ ರಾಕೆಟ್ ಲಾಂಚ್ ಯಶಸ್ವಿಯಾಗಿದ್ದು, 36 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಈ ಮೂಲಕ ಬ್ರಿಟನ್‌ನ ಉಪಗ್ರಹಗಳನ್ನು ಭಾರತ ಕಕ್ಷೆಗೆ ಸೇರಿಸಿದೆ.
ಶ್ರೀಹರಿಕೋಟ/ಬೆಂಗಳೂರು: ಭಾರಿ ತೂಕದ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಉದ್ದೇಶದಿಂದಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organization) (ಇಸ್ರೋ) (ISRO) ರೂಪಿಸಿರುವ ಎಲ್‌ವಿಎಂ3-ಎಂ2 (LVM3 - M2) (ಹಿಂದಿನ ಜಿಎಸ್‌ಎಲ್‌ವಿ ಮಾರ್ಕ್ 3) ರಾಕೆಟ್, ಶನಿವಾರ ತಡರಾತ್ರಿ 36 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಈ ಮೂಲಕ ಭಾರಿ ತೂಕದ ವಾಣಿಜ್ಯ ಉದ್ದೇಶದ ಉಪಗ್ರಹಗಳನ್ನು ಹಾರಿಬಿಡುವ ತನ್ನ ರಾಕೆಟ್ ಸಾಮರ್ಥ್ಯವನ್ನು ಯಶಸ್ವಿಯಾಗಿ ಸಾಬೀತುಪಡಿಸಿದೆ. ಜತೆಗೆ ಈ 36 ವಿದೇಶಿ ಉಪಗ್ರಹಗಳ ಉಡಾವಣೆಯಿಂದ 1000 ಕೋಟಿ ರೂ ಭರ್ಜರಿ ಆದಾಯ ಇಸ್ರೋಗೆ ಹರಿದುಬಂದಿದ್ದು, ಸಂಸ್ಥೆಯ ಈವರೆಗಿನ ಅತಿದೊಡ್ಡ ಆದಾಯ ಎನ್ನಿಸಿಕೊಂಡಿದೆ.
ಬ್ರಿಟನ್ ಮೂಲದ ಒನ್‌ವೆಬ್ ಕಂಪನಿಗಾಗಿ ಇಸ್ರೋದ ವಾಣಿಜ್ಯ ವಿಭಾಗವಾದ ಎನ್‌ಎಸ್‌ಐಎಲ್ (NSIL) ಈ 36 ಉಪಗ್ರಹಗಳನ್ನು ಹಾರಿಬಿಟ್ಟಿದೆ. ಈ 36 ಉಪಗ್ರಹಗಳ ಉಡ್ಡಯನಕ್ಕೆ ಇಸ್ರೋ 1000 ಕೋಟಿ ರೂ. ಗಳನ್ನು ಶುಲ್ಕವಾಗಿ ವಿಧಿಸಿದೆ ಎನ್ನಲಾಗಿದೆ. ಇನ್ನು ಕೆಲ ತಿಂಗಳಲ್ಲೇ ಮತ್ತೆ 36 ಉಪಗ್ರಹಗಳನ್ನು ಇದೇ ರಾಕೆಟ್ ಮೂಲಕ ಹಾರಿಬಿಡಲಿದ್ದು, ಅದಕ್ಕೆ ಮತ್ತೆ ಪ್ರತ್ಯೇಕವಾಗಿ 1000 ಕೋಟಿ ರೂ. ಶುಲ್ಕ ವಿಧಿಸಲಿದೆ.
ಇದನ್ನು ಓದಿ: ಒಟ್ಟಿಗೆ 36 ಉಪಗ್ರಹಗಳ ಉಡಾವಣೆ ಯಶಸ್ವಿ: ದೀಪಾವಳಿ ಆಚರಣೆ ಆರಂಭ ಎಂದ ISRO ಮುಖ್ಯಸ್ಥ
ಎಲ್ಲಾ 36 ಉಪಗ್ರಹಗಳ ಒಟ್ಟು ತೂಕ 5,800 ಕೆ.ಜಿ.ಗಳಷ್ಟಿದ್ದು, ಇದು ಈವರೆಗೆ ಇಸ್ರೋ ಒಮ್ಮೆಗೆ ಉಡ್ಡಯನ ಮಾಡಿದ ಅತ್ಯಂತ ಗರಿಷ್ಠ ತೂಕವಾಗಿದೆ. ಹೀಗಾಗಿಯೇ ಈ ಉಡ್ಡಯನ ಇಸ್ರೋ ಮತ್ತು ಅದರ ವಾಣಿಜ್ಯ ಉಡ್ಡಯನ ಉದ್ಯಮದ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದೆಂದು ಬಣ್ಣಿಸಲಾಗಿದೆ.
ಈ ಉಡ್ಡಯನವನ್ನು ಐತಿಹಾಸಿಕ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ಬಣ್ಣಿಸಿದ್ದಾರೆ. ಜೊತೆಗೆ ಇಸ್ರೋ ವಿಜ್ಞಾನಿಗಳಿಗೆ ದೀಪಾವಳಿ ಈ ಬಾರಿ ಮೊದಲೇ ಬಂದಿದೆ ಎಂದು ಹರ್ಷಿಸಿದ್ದಾರೆ. ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಈ ಐತಿಹಾಸಿಕ ಸಾಧನೆಗಾಗಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಈ ಯಶಸ್ವಿ ಉಡ್ಡಯನದೊಂದಿಗೆ ಕಳೆದ ಆಗಸ್ಟ್‌ನಲ್ಲಿ ಎಸ್‌ಎಸ್‌ಎಲ್‌ವಿ ಉಡ್ಡಯನದಲ್ಲಿ ಅನುಭವಿಸಿದ್ದ ವೈಫಲ್ಯವನ್ನು ಇಸ್ರೋ ಮೆಟ್ಟಿನಿಂತಂತೆ ಆಗಿದೆ.
ಇದನ್ನೂ ಓದಿ: 4 ವರ್ಷದ ಬಳಿಕ ಭಾರತದ ಭಾರೀ ರಾಕೆಟ್ ಉಡಾವಣೆಗೆ ಸಿದ್ಧತೆ, ಬ್ರಿಟನ್‌ನ 36 ಉಪಗ್ರಹ ಕಕ್ಷೆಗೆ!
ಯಶಸ್ವಿ ಉಡ್ಡಯನ:
ಶನಿವಾರ ತಡರಾತ್ರಿ 12.07ಕ್ಕೆ, 36 ಉಪಗ್ರಹಗಳನ್ನು ಹೊತ್ತ ಇಸ್ರೋದ ಎಲ್‌ವಿಎಂ3-ಎಂ2 ಗಗನಕ್ಕೆ ಚಿಮ್ಮಿತು. ಅದಾದ 75 ನಿಮಿಷಗಳಲ್ಲಿ ಒಂದಾದ ಮೇಲೊಂದರಂತೆ ಎಲ್ಲಾ 36 ಉಪಗ್ರಹಗಳನ್ನು ಕೆಳಹಂತದ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತು. ಇದರೊಂದಿಗೆ ವಿಶ್ವದಾದ್ಯಂತ ಅತಿವೇಗದ ಇಂಟರ್ನೆಟ್ ಸಂಪರ್ಕ ಕಲ್ಪಿಸಲು ಬ್ರಿಟನ್ ಒನ್‌ವೆಬ್ ಹಾರಿಬಿಡಲು ಉದ್ದೇಶಿಸಿರುವ 648 ಉಪಗ್ರಹಗಳ ಪೈಕಿ 462 ಉಪಗ್ರಹಗಳನ್ನು ಹಾರಿಬಿಟ್ಟಂತೆ ಆಗಲಿದೆ. ಮುಂದಿನ 4 ಉಡ್ಡಯನಗಳ ಮೂಲಕ 186 ಉಪಗ್ರಹಗಳನ್ನು ಹಾರಿಬಿಡಲಾಗುವುದು. ಈ ಪೈಕಿ 36 ಉಪಗ್ರಹಗಳ ಉಡ್ಡಯನ ಗುತ್ತಿಗೆ ಇಸ್ರೋಗೆ ಲಭಿಸಿದೆ. ಒನ್‌ವೆಬ್ ಕಂಪನಿಯಲ್ಲಿ ಭಾರತದ ಏರ್‌ಟೆಲ್ ಸಂಸ್ಥೆ ಕೂಡಾ ಪಾಲುದಾರನಾಗಿದೆ.
ಮಹತ್ವ ಏಕೆ?:
ಇದುವರೆಗೆ ಇಸ್ರೋ ಒಂದೇ ಬಾರಿಗೆ 100ಕ್ಕಿಂತ ಹೆಚ್ಚಿನ ಉಪಗ್ರಹಗಳನ್ನು ಹಾರಿಬಿಟ್ಟಿದೆಯಾದರೂ, ಅವುಗಳ ತೂಕ ಕಡಿಮೆ ಇತ್ತು. ಅದರೆ ಸಂಪರ್ಕ ಮೊದಲಾದ ಉಪಗ್ರಹಗಳ ತೂಕ ಹೆಚ್ಚಿರುತ್ತದೆ. ಇವುಗಳನ್ನು ಭೂಸ್ಥಿರ ಕಕ್ಷೆಗೆ ಅಥವಾ ಕೆಳ ಹಂತದ ಕಕ್ಷೆಗೆ ಸೇರಿಸಲು ಹೆಚ್ಚಿನ ಸಾಮರ್ಥ್ಯ ಇರುವ ರಾಕೆಟ್‌ಗಳ ಅವಶ್ಯಕತೆ ಇದೆ. ಹಾಲಿ ಭಾರತದ ಬಳಿ ಇರುವ ಜಿಎಸ್‌ಎಲ್‌ವಿ (GSLV) ಮತ್ತು ಪಿಎಸ್‌ಎಲ್‌ವಿ (PSLV) ರಾಕೆಟ್‌ಗಳ ಉಡ್ಡಯನ ಸಾಮರ್ಥ್ಯ ಕಡಿಮೆ.
ಇದನ್ನೂ ಓದಿ: NASA ಪ್ರಾಜೆಕ್ಟ್‌ಗೆ ಆಯ್ಕೆಯಾದ ಛತ್ತೀಸ್‌ಗಢದ 16 ವರ್ಷದ ಬುಡಕಟ್ಟು ಬಾಲಕಿ
ಹೀಗಾಗಿಯೇ ವಾಣಿಜ್ಯ ಉಪಗ್ರಹಗಳ ಉಡ್ಡಯನಕ್ಕೆಂದೇ ಇಸ್ರೋ ಎಲ್‌ವಿಎಂ-3-ಎಂ2 ರಾಕೆಟ್ ಅಭಿವೃದ್ಧಿಪಡಿಸಿತ್ತು. ಈ ರಾಕೆಟ್ ಭೂಸ್ಥಿರ ಕಕ್ಷೆಗೆ 4000 ಕೆಜಿ ತೂಕದ ಮತ್ತು ಕೆಳ ಹಂತದ ಕಕ್ಷೆಗೆ 8000 ಕೆಜಿಯಷ್ಟು ತೂಕದ ಉಪಗ್ರಹಗಳನ್ನು ಒಮ್ಮೆಗೆ ಹಾರಿಬಿಡಬಲ್ಲ ಸಾಮರ್ಥ್ಯ ಹೊಂದಿದೆ. ಇದರ ಅಭಿವೃದ್ಧಿಯಿಂದ ಜಾಗತಿಕ ಉಪಗ್ರಹ ಉಡ್ಡಯನ ಮಾರುಕಟ್ಟೆಯಲ್ಲಿ ಇಸ್ರೋಗೆ ಮತ್ತಷ್ಟು ಪಾಲು ಸಿಗಲಿದೆ. ಹೀಗಾಗಿಯೇ ಈ ಉಡ್ಡಯನ ಇಸ್ರೋ ಪಾಲಿಗೆ ಅತ್ಯಂತ ಮಹತ್ವದ್ದಾಗಿತ್ತು.
ಈ ನಡುವೆ ಇದರ ಯಶಸ್ಸಿನ ಬೆನ್ನಲ್ಲೇ ಜಿಎಸ್‌ಎಲ್‌ವಿ ಮಾರ್ಕ್-3 ಹೆಸರನ್ನು ಎಲ್‌ಎಂವಿ ಮಾರ್ಕ್ 3 ಎಂದು ಇಸ್ರೋ ಬದಲಿಸಿದೆ.
ಇದೊಂದು ಐತಿಹಾಸಿಕ ಉಡ್ಡಯನ. ಇಸ್ರೋ ವಿಜ್ಞಾನಿಗಳಿಗೆ ದೀಪಾವಳಿ ಈ ಬಾರಿ ಮೊದಲೇ ಬಂದಿದೆ. ಈ ಸಾಧನೆಗಾಗಿ ನಮ್ಮ ತಂಡಕ್ಕೆ ಮತ್ತು ನಮ್ಮ ಮೇಲೆ ವಿಶ್ವಾಸವಿಟ್ಟಒನ್‌ವೆಬ್ ತಂಡಕ್ಕೆ ಧನ್ಯವಾದಗಳು. ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲದಿಂದಾಗಿ ಈ ಸಾಧನೆ ಸಾಧ್ಯವಾಗಿದೆ.
- ಸೋಮನಾಥ್, ಇಸ್ರೋ ಮುಖ್ಯಸ್ಥ
ಇದನ್ನೂ ಓದಿ: ISRO Reusable Rocket ಮರುಬಳಕೆ ಮಾಡಬಹುದಾದ ರಾಕೆಟ್ ನಿರ್ಮಾಣ ಮಾಡಲಿರುವ ಇಸ್ರೋ!
ಜಾಗತಿಕ ಸಂಪರ್ಕಕ್ಕಾಗಿನ ಒನ್‌ವೆಬ್‌ನ 36 ಉಪಗ್ರಹಗಳನ್ನು ಎಲ್‌ವಿಎಂ.3 ರಾಕೆಟ್ ಮೂಲಕ ಯಶಸ್ವಿಯಾಗಿ ನಿಗದಿತ ಕಕ್ಷೆಗೆ ಸೇರಿಸಿದ ಎನ್‌ಎಸ್‌ಐಎಲ್, ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು. ಎಲ್‌ವಿಎಂ3 ರಾಕೆಟ್, ಆತ್ಮನಿರ್ಭರ ಭಾರತಕ್ಕೆ ಮತ್ತಷ್ಟುಉದಾಹರಣೆಯಾಗಿ ಹೊರಹೊಮ್ಮುವುದರ ಜೊತೆಗೆ ಜಾಗತಿಕ ಉಪಗ್ರಹ ಉಡ್ಡಯನ ಮಾರುಕಟ್ಟೆಯಲ್ಲಿ ಭಾರತದ ತಾಂತ್ರಿಕ ಪರಿಗಣಿಯನ್ನು ಮತ್ತೆ ಸಾಬೀತುಪಡಿಸದೆ.
- ನರೇಂದ್ರ ಮೋದಿ, ಪ್ರಧಾನಿ
