ನವದೆಹಲಿ (ಡಿ. 04): ವಲಸಿಗರಿಗೂ ಆಹಾರ ಭದ್ರತೆ ಕಲ್ಪಿಸುವ ಮತ್ತು ಪಡಿತರ ಚೀಟಿದಾರರು ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪಡೆದುಕೊಳ್ಳಲು ಸಹಾಯಕವಾಗುವ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಯೋಜನೆಯನ್ನು 2020 ರ ಜೂನ್‌ನಿಂದ ದೇಶಾದ್ಯಂತ ಜಾರಿ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಲ್ಲದೆ ‘ಒಂದು ದೇಶ ಒಂದೇ ಗುಣಮಟ್ಟ’ ಯೋಜನೆ ಜಾರಿಗೂ ಕಾರ್ಯೋನ್ಮುಖವಾಗಿದೆ ಎಂದು ಹೇಳಿದೆ.

ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟ ವ್ಯಕ್ತಿ ಮೋದಿ

ಈ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌, ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ ಜಾರಿ ಬಳಿಕ ಅರ್ಹ ಫಲಾನುಭವಿಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆದುಕೊಳ್ಳಬಹುದು. ಬಯೋಮೆಟ್ರಿಕ್‌ ಮತ್ತು ಆಧಾರ್‌ ದೃಢೀಕರಣ ಬಳಿಕ ಪಡಿತರ ನೀಡಲಾಗುತ್ತದೆ. ಇದರಿಂದ ವಲಸಿಗ ನೌಕರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಇದೇ ವೇಳೆ, ಭಾರತೀಯ ಗುಣಮಟ್ಟದಳಕ್ಕೆ ಒಂದೇ ಮಾದರಿ ಗುಣಮಟ್ಟವ್ಯವಸ್ಥೆ ರೂಪಿಸಲು ಸೂಚಿಸಲಾಗಿದೆ. ಸದ್ಯ ದೇಶದಲ್ಲಿ 20 ಸಾವಿರ ಭಾರತೀಯ ಗುಣಮಟ್ಟಗಳಿವೆ ಎಂದು ತಿಳಿಸಿದರು.