ನವದೆಹಲಿ(ಸೆ.30): ಆಗಸ್ಟ್‌ 2020ರ ವೇಳೆಗೆ ದೇಶದಲ್ಲಿ 10 ವರ್ಷ ವಯಸ್ಸು ಮೇಲ್ಪಟ್ಟ15 ಜನರಲ್ಲಿ ಒಬ್ಬ ವ್ಯಕ್ತಿ, ಕೊರೋನಾ ವೈರಸ್‌ ಸೋಂಕಿತರಾಗಿದ್ದರು ಎಂದು ಐಸಿಎಂಆರ್‌-ಸೀರೋ ಸಮೀಕ್ಷೆ ಹೇಳಿದೆ. ಮಂಗಳವಾರ ಸಮೀಕ್ಷೆಯ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಯಿತು. ಆಗಸ್ಟ್‌ 17ರಿಂದ ಸೆಪ್ಟೆಂಬರ್‌ 22ರವರೆಗೆ 29,082 ಜನರನ್ನು (10 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ) ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಶೇ.6.6ರಷ್ಟುಜನರು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಸಾಬೀತಾಗಿದೆ. ಇನ್ನು 18 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಶೇ.7.7 ಜನರು ಕೊರೋನಾ ಸೋಂಕಿತರಾಗಿದ್ದಾರೆ ಎಂದೂ ತಿಳಿದುಬಂದಿದೆ.

ಲಾಕ್‌ಡೌನ್‌, ಕಂಟೈನ್ಮೆಂಟ್‌ ಸೇರಿದಂತೆ ಹಲವಾರು ಕೊರೋನಾ ನಿಯಂತ್ರಣ ಕ್ರಮಗಳನ್ನು ಸಮೀಕ್ಷೆ ವೇಳೆ ಅವಲೋಕಿಸಲಾಗಿದೆ. ಆದರೆ ದೇಶದ ಜನರಿಗೆ ಕೊರೋನಾ ಭೀತಿ ಇದ್ದೇ ಇದೆ ಎಂದು ಐಸಿಎಂಆರ್‌ ಮಹಾನಿರ್ದೇಶಕ ಬಲರಾಂ ಭಾರ್ಗವ ಹೇಳಿದ್ದಾರೆ.

ನಗರದ ಸಾಮಾನ್ಯ ಪ್ರದೇಶಗಳಿಗಿಂತ ಸ್ಲಂಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣ 2 ಪಟ್ಟು ಇದೆ ಹಾಗೂ ಗ್ರಾಮೀಣ ಭಾಗಗಳಲ್ಲಿ 4 ಪಟ್ಟು ಇದೆ.

ಮೊದಲ ಸಮೀಕ್ಷೆ ನಡೆಸಿದ 21 ರಾಜ್ಯಗಳ 70 ಜಿಲ್ಲೆಗಳ 700 ಗ್ರಾಮಗಳು ಹಾಗೂ ವಾರ್ಡ್‌ಗಳಲ್ಲೇ 2ನೇ ಸಮೀಕ್ಷೆ ನಡೆಸಲಾಗಿದೆ. ಮೇ 2020ರಲ್ಲಿ ನಡರದ ಮೊದಲ ಸಮೀಕ್ಷೆಯಲ್ಲಿ ಸೋಂಕಿನ ಪ್ರಮಾಣ ಕೇವಲ ಶೇ.0.73ರಷ್ಟಿತ್ತು. ಆದರೆ 2ನೇ ಸಮೀಕ್ಷೆಯಲ್ಲಿ ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದು ಸಾಬೀತಾಗಿದೆ.

‘ಮುಂದಿನ ದಿನಗಳಲ್ಲಿ ಹಬ್ಬ ಹರಿದಿನಗಳ ಸಾಲುಗಳೇ ಬರಲಿವೆ. ಜತೆಗೆ ಚಳಿಗಾಲವೂ ಬರಲಿದೆ. ಹಬ್ಬಗಳಲ್ಲಿ ಮಾಸ್ಕ್‌ ಧರಿಸಿಯೇ ಪಾಲ್ಗೊಳ್ಳಬೇಕು. ಇನ್ನು ಚಳಿಗಾಲದಲ್ಲಿ ವಿಷಮಶೀತ ಜ್ವರ ಹಾಗೂ ನ್ಯುಮೋನಿಯಾ ಹೆಚ್ಚಳ ಭೀತಿ ಇದೆ. ಈ ಕಾರಣ ಸರ್ಕಾರ ಮುಂಜಾಗರೂಕತಾ ಕ್ರಮ ಕೈಗೊಂಡಿದೆ’ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್‌ ಹೇಳಿದ್ದಾರೆ.

‘ದಿಲ್ಲಿ, ಕೇರಳ ಹಾಗೂ ಪಂಜಾಬ್‌ನಲ್ಲಿ ಕೊರೋನಾದ 2ನೇ ಅಲೆ ಎದ್ದಿದೆ. ಈ ಕಾರಣ ಕೊರೋನಾ ಮಾರ್ಗಸೂಚಿಗಳ ಬಗ್ಗೆ ಉದಾಸೀನ ಸಲ್ಲದು’ ಎಂದೂ ಅವರು ಹೇಳಿದ್ದಾರೆ.