ಔರೆಯಾ(ಮೇ.16): ಉತ್ತರ ಪ್ರದೇಶದ ಔರೆಯಾದಲ್ಲಿ ಇಂದು, ಶನಿವಾರ ಮುಂಜಾನೆ ಸುಮಾರು ಮೂರೂವರೆ ಗಂಟೆಗೆ ಟ್ರಕ್‌ಗಳ ನಡುವೆ ಸಂಭವಿಸಿದ ಅಪಘಾತದಿಂದ 24 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ 40ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೀಗ ಹೆಚ್ಚುವರಿ ಮಾಹಿತಿ ಲಭ್ಯವಾಗಿದ್ದು, ಕೇವಲ ಒಂದು ಕಪ್ ಟೀ ಹಲವರ ಪ್ರಾಣ ಕಾಪಾಡಿದ್ದು, ಇದರಿಂದ ಸಾವು ನೋವು ಕಡಿಮೆಯಾಗಿದೆ ಎನ್ನಲಾಗಿದೆ.

ಹೌದು ದೆಹಲಿಯಿಂದ ಬಂದಿದ್ದ ಟ್ರಕ್ ಡಾಬಾ ಒಂದರ ಬಳಿ ನಿಂತಿತ್ತು. ಇದರಲ್ಲಿದ್ದ ಅನೇಕ ಕಾರ್ಮಿಕರು ಚಹಾ ಕುಡಿಯಲು ಇಳಿದಿದ್ದರೆನ್ನಲಾಗಿದೆ. ಇವರೆಲ್ಲರೂ ಉತ್ತರ ಪ್ರದೇಶದ ವಿವಿಧ ಜಿಲ್ಲೆಯವರಾಗಿದ್ದರು. ಹೀಗಿರುವಾಗಲೇ ಫರಿದಾಬಾದ್‌ನಿಂದ ಬರುತ್ತಿದ್ದ ಸುಮಾರು ಎಂಬತ್ತು ಮಂದಿಯಿದ್ದ ಮತ್ತೊಂದು ಟ್ರಕ್, ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ಟ್ರಕ್‌ನಲ್ಲಿ ಗೋಣಿ ಚೀಲಗಳು ಹಾಗೂ ಝಾರ್ಖಂಡ್, ಬಿಹಾಯ, ಯುಪಿ, ಪಶ್ಚಿಮ ಬಂಗಾಳದ ಪ್ರವಾಸಿ ಕಾರ್ಮಿಕರಿದ್ದರು. ಆದರೆ ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ ಕಾರ್ಮಿಕರೆಲ್ಲಾ ಗೋಣಿಗಳ ಕೆಳಗೆ ಸಿಲುಕಿಕೊಂಡಿದ್ದರು. ಅವರನ್ನು ಹೊರ ತೆಗೆಯುವಷ್ಟರಲ್ಲಿ ಬಹಳ ತಡವಾಗಿದ್ದು, ಸಾವನ್ನಪ್ಪಿದ್ದಾರೆ. 

ಭೀರಕ ರಸ್ತೆ ಅಪಘಾತ: 24 ಕಾರ್ಮಿಕರ ದುರ್ಮರಣ, 36 ಮಂದಿಗೆ ಗಾಯ!

ಇನ್ನು ಈ ಭೀಕರ ಅಪಘಾತ ಸಂಬಂಧ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಈ ಅಪಘಾತ ಬಹಳ ನೋವುಂಟು ಮಾಡಿದೆ. ರಕ್ಷಣಾ ಕಾರ್ಯ ನಡೆಯುತ್ತಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಸಂತ್ರಸ್ತರ ಕುಟುಂದ ಪರ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಜೊತೆಗೆ ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.