Asianet Suvarna News Asianet Suvarna News

ಕೋವಿಶೀಲ್ಡ್‌ ಲಸಿಕೆ ಡೋಸ್‌ ಅವಧಿ ಡಬಲ್‌, ಭಾರೀ ವಿವಾದ!

* ಕೋವಿಶೀಲ್ಡ್‌ ಡೋಸ್‌ ಅವಧಿ ಡಬಲ್‌ ವಿವಾದ

* ನಾವು ಶಿಫಾರಸು ಮಾಡಿದ್ದು 8-12 ವಾರ: ಕೆಲವು ತಾಂತ್ರಿಕ ಸಲಹಾ ಸಮಿತಿ ಸದಸ್ಯರ ವಾದ

* ಸಮಿತಿ ಶಿಫಾರಸಿನ ಅನ್ವಯವೇ ಅವಧಿ 12-16 ವಾರಕ್ಕೆ ವಿಸ್ತರಣೆ: ಕೇಂದ್ರದ ಸ್ಪಷ್ಟನೆ

On Covishield Dose Gap Controversy, Health Minister Clarification pod
Author
Bangalore, First Published Jun 17, 2021, 8:32 AM IST

ನವದೆಹಲಿ(ಜೂ.17): ಕೋವಿಶೀಲ್ಡ್‌ ಲಸಿಕೆ 2 ಡೋಸ್‌ ನಡುವಿನ ಅಂತರವನ್ನು 6-8 ವಾರದಿಂದ 12-16 ವಾರಕ್ಕೆ ವಿಸ್ತರಿಸಿದ ಕೇಂದ್ರ ಸರ್ಕಾರದ ನಿರ್ಧಾರವೀಗ ವಿವಾದಕ್ಕೆ ಕಾರಣವಾಗಿದೆ.

‘ನಾವು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ್ದ 8-12 ವಾರಗಳ ಅವಧಿಯನ್ನು ಮಾತ್ರವೇ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆವು. ಆದರೆ ಈ 12-16 ವಾರ ಎಲ್ಲಿಂದ ಬಂತೋ ಗೊತ್ತಿಲ್ಲ’ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ 3 ಸದಸ್ಯರು ಹೇಳಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾತ್ರ ಸಮಿತಿಯ ಅಧ್ಯಕ್ಷ ಡಾ. ಎನ್‌.ಕೆ. ಅರೋರಾ ಅವರು ನೀಡಿದ್ದ ಹೇಳಿಕೆಯನ್ನು ಮುಂದಿಟ್ಟುಕೊಂಡು, ಮೇ 13 ರಂದು ತಾನು ಕೈಗೊಂಡ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದೆ. 12-16 ವಾರಕ್ಕೆ ವಿಸ್ತರಿಸಿದ ಕ್ರಮ, ವೈಜ್ಞಾನಿಕ ಅಧ್ಯಯನದ ಮೇಲೆ ಆಧರಿಸಿದ ಸರ್ವಸಮ್ಮತ ನಿರ್ಣಯವಾಗಿತ್ತು ಎಂದು ಸ್ಪಷ್ಟಪಡಿಸಿದೆ.

ನಾವು ಬೆಂಬಲಿಸಿಲ್ಲ- 3 ಸದಸ್ಯರು:

ಲಸಿಕೆ ಕುರಿತು ಸರ್ಕಾರಕ್ಕೆ ಸಲಹೆ ನೀಡಲೆಂದು ರಚಿಸಲಾಗಿರುವ 14 ಜನರ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾಗಿರುವ ಎಂ.ಡಿ.ಗುಪ್ತೆ, ಮ್ಯಾಥ್ಯೂ ವರ್ಗೀಸ್‌, ಜೆ.ಪಿ.ಮುಲಿಯಿಲ್‌ ರಾಯಿಟ​ರ್‍ಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದು, ‘2 ಡೋಸ್‌ ನಡುವಿನ ಅವಧಿ ದ್ವಿಗುಣಗೊಳಿಸಿದ ಸರ್ಕಾರದ ನಿರ್ಧಾರವನ್ನು ನಾವು ಬೆಂಬಲಿಸಿರಲಿಲ್ಲ’ ಎಂದಿದ್ದಾರೆ.

‘ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ್ದ 8-12 ವಾರಗಳ ಅಂತರವನ್ನು ನಾವು ಕೂಡಾ ಶಿಫಾರಸು ಮಾಡಿದ್ದೆವು. 12ಕ್ಕಿಂತ ಹೆಚ್ಚಿನ ವಾರಗಳಿಗೆ ಅಂತರ ವಿಸ್ತರಿಸಿದರೆ ಆಗುವ ಪರಿಣಾಮಗಳ ಬಗ್ಗೆ ಸಮಿತಿ ಬಳಿ ಯಾವುದೇ ವರದಿ, ದಾಖಲೆಗಳು ಇರಲಿಲ್ಲ. 8-12 ವಾರಗಳ ಅಂತರವನ್ನು ನಾವೆಲ್ಲಾ ಒಪ್ಪಿಕೊಂಡಿದ್ದೆವು. ಆದರೆ ಸರ್ಕಾರ ಅಂತಿಮವಾಗಿ 12-16 ವಾರಗಳ ಅಂತರಕ್ಕೆ ನಿರ್ಧರಿಸಿತು. ಅದು ಸರಿಯೇ ಇರಬಹುದು. ಆ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ’ ಎಂದು ಡಾ. ಗುಪ್ತೆ ಹೇಳಿದ್ದಾರೆ. ಈ ಮಾತನ್ನು ಮ್ಯಾಥ್ಯೂ ವರ್ಗೀಸ್‌ ಕೂಡಾ ಬೆಂಬಲಿಸಿದ್ದಾರೆ. ಇನ್ನು ಜೆ.ಪಿ.ಮುಲಿಯಿಲ್‌ ಮಾತನಾಡಿ, ಡೋಸ್‌ ನಡುವಿನ ಅಂತರ ಹೆಚ್ಚಿಸುವ ಬಗ್ಗೆ ಚರ್ಚೆ ನಡೆದಿತ್ತಾದರೂ, ಸಮಿತಿ 12-16 ವಾರಗಳ ಅಂತರವನ್ನು ಶಿಫಾರಸು ಮಾಡಿರಲಿಲ್ಲ ಎಂದಿದ್ದಾರೆ.

ಸರ್ಕಾರದ ಸ್ಪಷ್ಟನೆ:

ಈ ನಡುವೆ 3 ಸದಸ್ಯರ ಆರೋಪ ತಿರಸ್ಕರಿಸಿರುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ದನ್‌, ‘ಕೋವಿಶೀಲ್ಡ್‌ ಡೋಸ್‌ ನಡುವಿನ ಅಂತರ ಹೆಚ್ಚಿಸುವ ನಿರ್ಧಾರವನ್ನು ಪಾರದರ್ಶಕವಾಗಿ, ವೈಜ್ಞಾನಿಕ ಅಂಕಿ ಅಂಶಗಳ ಆಧಾರದಲ್ಲೇ ತೆಗೆದುಕೊಳ್ಳಲಾಗಿದೆ. ಅಂಕಿ ಅಂಶಗಳನ್ನು ಅತ್ಯಂತ ವಿಸ್ತೃತ ಮತ್ತು ಸೂಕ್ಷ್ಮವಾಗಿ ಪರಿಶೀಲಿಸುವ ವ್ಯವಸ್ಥೆ ಭಾರತದಲ್ಲಿದೆ. ಇಂಥ ಪ್ರಮುಖ ವಿಷಯಗಳನ್ನು ರಾಜಕೀಯಗೊಳಿಸುತ್ತಿರುವುದು ವಿಷಾದಕರ ಸಂಗತಿ’ ಎಂದಿದ್ದಾರೆ.

ಇನ್ನು ಕೇಂದ್ರ ಆರೋಗ್ಯ ಸಚಿವಾಲಯ ಕೂಡಾ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ‘ದರಲ್ಲಿ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಎನ್‌.ಕೆ.ಅರೋರಾ ನೀಡಿದ್ದ ಹೇಳಿಕೆಯನ್ನು ಲಗತ್ತಿಸಲಾಗಿದೆ. ಅದರಲ್ಲಿ ಡಾ. ಅರೋರಾ, ‘ಬ್ರಿಟನ್‌ನ ಆರೋಗ್ಯ ನಿಯಂತ್ರಣ ಪ್ರಾಧಿಕಾರ ನಡೆಸಿದ ಅಧ್ಯಯನದಲ್ಲಿ, ಲಸಿಕೆ ನಡುವಿನ ಅಂತರವನ್ನು 12ಕ್ಕಿಂತ ಅಧಿಕ ವಾರಗಳಿಗೆ ಹೆಚ್ಚಿಸಿದಾಗ, ಲಸಿಕೆಯು ಶೇ.65ರಿಂದ ಶೇ.88ರಷ್ಟುಹೆಚ್ಚು ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ. ಇದರ ಆಧಾರದಲ್ಲೇ ಅವರು ಆಲ್ಫಾ ತಳಿಯ ಅಲೆಯನ್ನು ತಡೆಯಲು ಯಶಸ್ವಿಯಾಗಿದ್ದು, ಹೀಗಾಗಿ ನಾವು ಕೂಡಾ ಅದೇ ಉತ್ತಮ ಉಪಾಯ ಎಂದು ಪರಿಗಣಿಸಿದೆವು. ಅಂತರ ಹೆಚ್ಚಿಸುವ ನಿರ್ಧಾರವನ್ನು ಕೋವಿಡ್‌ ಕಾರ್ಯಪಡೆ ಯಾವುದೆ ಭಿನ್ನ ಅಭಿಪ್ರಾಯ ಇಲ್ಲದೆಯೇ ಅಂಗೀಕರಿಸಿದೆ. ಬಳಿಕ ತಾಂತ್ರಿಕ ಸಮಿತಿ ಕೂಡಾ ಈ ಬಗ್ಗೆ ಸಾಕಷ್ಟುಚರ್ಚೆ ನಡೆಸಿ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆಯೇ ಅನುಮೋದಿಸಿತು’ ಎಂದು ಹೇಳಿದ್ದಾರೆ.

ಅಂತರ ಮರುಪರಿಶೀಲನೆಗೆ ಸಿದ್ಧ- ಅರೋರಾ:

ಈ ನಡುವೆ ಪ್ರಸಕ್ತ ದತ್ತಾಂಶಗಳನ್ನು ಆಧರಿಸಿ ಕೋವಿಶೀಲ್ಡ್‌ ಲಸಿಕೆಯ ಅಂತರ ಪರಿಷ್ಕರಿಸಲು ಸಿದ್ಧರಿದ್ದೇವೆ ಎಂದು ಅರೋರಾ ಬುಧವಾರ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, 12-16 ವಾರದ ಅವಧಿ ಹೆಚ್ಚಳ ಸರ್ವಸಮ್ಮತ ನಿರ್ಣಯ ಆಗಿತ್ತು ಎಂದಿದ್ದಾರೆ.

Follow Us:
Download App:
  • android
  • ios