ಲಕ್ನೋ(ಏ.08): ಉತ್ತರ ಪ್ರದೇಶದ ಶಾಮಲಿಯ ಕಸ್ಬಾದಲ್ಲಿ ಪೊಲೀಸರ ಸ್ಪೆಷಲ್ ಆಪರೇಷನ್ ತಂಡ ಬುಧವಾರ ರಾತ್ರಿ ಬಿಜೆಪಿ ನಾಯಕನೊಬ್ಬನ ಕಾರಿನ ಮೇಲೆ ಫೈರಿಂಗ್ ನಡೆಸಿದ್ದು, ಈ ವೇಳೆ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕ ಪೊಲೀಸರು ತನ್ನನ್ನು ಕೊಲ್ಲಲು ಯತ್ನಿಸಿದ್ದಾರೆಂಬ ಆರೋಪ ಮಾಡಿದ್ದಾರೆ. ಅಲ್ಲದೇ ಪೊಲೀಸರು ರಾತ್ರಿ ತನ್ನನ್ನು ವಶಕ್ಕೆ ಪಡೆದು ಟಾರ್ಚರ್ ನೀಡಿದ್ದಾರೆ. ತನ್ನನ್ನು ಕೊಲ್ಲಲು ಅವರಿಗೆ ಹಣ ನೀಡಿದ್ದಾರೆಂದೂ ಆರೋಪಿಸಿದ್ದಾರೆ. ಘಟನೆ ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ.

ಹೌದು ಶಾಮಲಿ ಜಿಲ್ಲೆಯ ಎಮುಲ್ ಕಸ್ಬಾ ನಿವಾಸಿ ಬಿಜೆಪಿ ನಾಯಕ ಅಶ್ವಿನಿ ಪವಾರ್ ಈ ದಾಳಿ ನಡೆದ ಸಂದರ್ಭದಲ್ಲಿ ಕೆಲವರೊಂದಿಗೆ ತಮ್ಮ ಕಾರಿನಲ್ಲಿ ದೆಹಲಿಯ ಸಹಾರನಂಪುರಕ್ಕೆ ತೆರಳುತ್ತಿದ್ದರು.  ಲಭ್ಯವಾದ CCTV ದೃಶ್ಯದಲ್ಲಿ ನಿಧಾನವಾಗಿ ಚಲಿಸಲಾರಂಭಿಸಿದ ಕಾರು ಕೊನೆಗೆ ರಸ್ತೆಯಲ್ಲೇ ನಿಂತಿದೆ. ಅಷ್ಟರಲ್ಲೇ ಮಫ್ತಿಯಲ್ಲಿದ್ದ ಪೊಲೀಸರು ಕಾರನ್ನು ಸುತ್ತುವರೆದಿದ್ದಾರೆ. ಇದಾದ ಕೆಲವೇ ಕ್ಷಣದಲ್ಲಿ ಕಾರು ಬಹಳ ವೇಗವಾಗಿ ಅಲ್ಲಿಂದ ಮುಂದೆ ಸಾಗಿದೆ. 

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪವಾರ್ 'ನನ್ನ ಮಕ್ಕಳು ರೆಸ್ಟೋರೆಂಟ್‌ಗೆ ಹೋಗಿ ಊಟ ಮಾಡಬೇಕೆಂದು ಹಠ ಮಾಡುತ್ತಿದ್ದರು. ಹೀಗಾಗಿ ಹೊರಗೆ ಹೊರಟಿದ್ದೆವು. ಪೆಟ್ರೋಲ್‌ ಪಂಪ್‌ ಒಂದರ ಬಳಿ ತೆರಳಿ, ಪೆಟ್ರೋಲ್ ಹಾಕಿಸಿ ಹೊರಟೆವು. ಹೀಗಿರುವಾಗ ಸ್ವಲ್ಪ ಹೊತ್ತಲ್ಲೇ ಕಾರ್ಡ್‌ ಸ್ವೈಪ್‌ ಮಷೀನ್ ನನ್ನ ಕಾರಿನ ಮೇಲೇ ಉಳಿದುಕೊಂಡಿದೆ ಎಂದು ನೆನಪಾಯ್ತು. ಹೀಗಾಗಿ ನಾನು ಕಾರು ನಿಲ್ಲಿಸಿ ಪೆಟ್ರೋಲ್ ಪಂಪ್‌ ಅಟೆಂಡರ್‌ನ್ನು ಕರೆದೆ. ಈ ನಡುವೆ ಎಸ್‌ಒಜಿ ತಂಡದ ಪೊಲೀಸರು ಪಿಸ್ತೂಲ್‌ ಹಿಡಿದು ನಮ್ಮ ಕಾರಿನತ್ತ ಧಾವಿಸಿರುವುದನ್ನು ನೋಡಿದೆ. ಅಷ್ಟರಲ್ಲೇ ಅವರು ಫೈರಿಂಗ್ ಆರಂಭಿಸಿದ್ದರು. ಹೀಗಾಗಿ ನಾನು ಕೂಡಲೇ ಕಾರು ಸ್ಟಾರ್ಟ್‌ ಮಾಡಿ ಅಲ್ಲಿಂದ ಹೊರಟೆ. ಅಷ್ಟರಲ್ಲಾಗಲೇ ಅವರು 10-15ಗುಂಡು ಹಾರಿಸಿದ್ದರು' ಎಂದಿದ್ದಾರೆ.

ಇನ್ನು ಅಶ್ವಿನಿ ಪವಾರ್‌ ಜೊತೆ ಕಾರಿನಲ್ಲಿದ್ದ ಉಳಿದ ನಾಲ್ವರಲ್ಲಿ ಒಬ್ಬನಾದ ಮನೀಷ್ ಕುಮಾರ್‌ಗೆ ಗುಂಡೇಟು ತಗುಲಿದದ್ದು, ಉಳಿದ ಗುಂಡುಗಖು ಕಾರಿಗೆ ತಾಗಿವೆ. 

ಇನ್ನು ಈ ಘಟನೆ ಬೆನ್ನಲ್ಲೇ ತಂಡ ತನ್ನ ಮನೆಗೆ ಬಂದಿದ್ದು, ಎಸ್‌ಒಜಿಯ ಕಮಾಂಡಿಂಗ್ ಆಫೀಸರ್ ಜಿತೇಂದ್ರ ಸಿಂಗ್ ಆದೇಶದ ಮೇರೆಗೆ ತನ್ನನ್ನು ಪೊಲೀಸ್ ಠಾಣೆಗೂ ಕರೆದೊಯ್ದರು. ಇಲ್ಲಿ ಇಡೀ ರಾತ್ರಿ ತನಗೆ ಪೊಲೀಸರು ಟಾರ್ಚರ್ ಕೊಟ್ಟು, ನಕಲಿ ಕೇಸ್‌ನಲ್ಲಿ ಸಿಲುಕಿಸಿ ಹಾಕುವ ಬೆದರಿಕೆ ಒಡ್ಡಿದ್ದರೆಂದೂ ಅಶ್ವಿನಿ ಆರೋಪಿಸಿದ್ದಾರೆ. ಪೊಲೀಸರು ತನ್ನನ್ನು ಕೊಲ್ಲುವ ಯತ್ನ ನಡೆಸಿದ್ದಾರೆಂಬ ಗಂಬೀರ ಆರೋಪವನ್ನೂ ಮಾಡಿದ್ದಾರೆ.

ಇತ್ತ ಶಾಮಲಿಯ ಪೊಲೀಸ್ ಅಧೀಕ್ಷಕ ಈ ಬಗ್ಗೆ ಮಾತನಾಡುತ್ತಾ ಈ ಆರೋಪ ಗಂಭೀರವಾದದ್ದು. ಎಲ್ಲಾ ದಿಕ್ಕಿನಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.