ಚಪ್ಪಲಿ ಬಿಟ್ಟು ಬನ್ನಿ ಎಂದಿದ್ದಕ್ಕೆ ವೈದ್ಯನಿಗೆ ಚಪ್ಪಲಿ ಬಿಚ್ಚಿ ಹೊಡೆದ ರೋಗಿಯ ಸಂಬಂಧಿಗಳು
ಗುಜರಾತ್‌ನ ಭಾವ್ನಗರದಲ್ಲಿ ವೈದ್ಯರೊಬ್ಬರಿಗೆ ರೋಗಿಯ ಸಂಬಂಧಿಕರು ಚಪ್ಪಲಿ ತೆಗೆಯುವಂತೆ ಹೇಳಿದ್ದಕ್ಕೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲಾಗಿದೆ.
ಭಾವ್ನಾಗರ್: ಸಂಸ್ಕೃತದಲ್ಲಿ ವೈದ್ಯೋ ನಾರಾಯಣೋ ಹರಿ ಎಂದರೆ ವೈದ್ಯರು ದೇವರಿಗೆ ಸಮಾನ ಎಂಬ ಮಾತಿದೆ. ಆದರೆ ದೇಶದಲ್ಲಿ ಮಾತ್ರ ದಿನವೂ ಒಂದಲ್ಲ, ಒಂದು ಕಡೆ ವೈದ್ಯರ ಮೇಲೆ ಹಲ್ಲೆಗಳಾಗುತ್ತಿವೆ. ಕೋಲ್ಕತ್ತಾದಲ್ಲಿ ವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿರುವಾಗ ಈಗ ಗುಜರಾತ್‌ನಲ್ಲಿ ವೈದ್ಯರೊಬ್ಬರಿಗೆ ರೋಗಿಯ ಸಂಬಂಧಿಕರು ಕ್ಷುಲ್ಲಕ ಕಾರಣಕ್ಕೆ ಅಮಾನವೀಯವಾಗಿ ಥಳಿಸಿದ್ದಾರೆ.
ಚಪ್ಪಲಿ ಹೊರಗಿಟ್ಟು ಬನ್ನಿ ಎಂದ ವೈದ್ಯನಿಗೆ ರೋಗಿಯ ಸಂಬಂಧಿಗಳು ಕಾಲಿನಲ್ಲಿದ್ದ ಚಪ್ಪಲಿಯನ್ನು ಕೈಗೆ ತೆಗೆದುಕೊಂಡು ಬಾರಿಸಿದಂತಹ ಅಮಾನವೀಯ ಘಟನೆ ಗುಜರಾತ್‌ನ ಭಾವ್ನಾಗರದಲ್ಲಿ ನಡೆದಿದೆ. ಅಸ್ವಸ್ಥರಾಗಿದ್ದ ಮಹಿಳೆಯೊಬ್ಬರನ್ನು ಕರೆದುಕೊಂಡು ಆಕೆಯ ಸಂಬಂಧಿಕರು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ವೈದ್ಯರು ಮಹಿಳೆಯ ಸಂಬಂಧಿಕರಿಗೆ ಚಪ್ಪಲಿ ಹೊರಗಿಟ್ಟು ಚಿಕಿತ್ಸೆಗೆ ಬರುವಂತೆ ಹೇಳಿದ್ದಾರೆ. ಇಷ್ಟಕ್ಕೆ ಕುಪಿತರಾದ ರೋಗಿಯ ಸಂಬಂಧಿಕರು ವೈದ್ಯನಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಲ್ಕತ್ತಾ ಬಲತ್ಕಾರ, ಹತ್ಯೆ ಪ್ರಕರಣ ಬೆನ್ನಲ್ಲೇ ಮುಂಬೈನಲ್ಲೂ ವೈದ್ಯೆಗೆ ಲೈಂಗಿಕ ಕಿರುಕುಳ!
ಎಮರ್ಜೆನ್ಸಿ ರೂಮ್‌ಗೆ ಬರುವ ಮೊದಲು ಚಪ್ಪಲಿ ಬಿಚ್ಚಿಡುವಂತೆ ವೈದ್ಯರು ರೋಗಿಯ ಸಂಬಂಧಿಗಳಿಗೆ ಹೇಳಿದ್ದಾರೆ. ಆದರೆ ಡಾಕ್ಟರ್ ಮಾತಿಗೆ ಸಿಟ್ಟಾದ ರೋಗಿಯ ಸಂಬಂಧಿಗಳು ಚಪ್ಪಲಿ ಬಿಚ್ಚಿ ಥಳಿಸಿದ್ದಾರೆ. ಭಾವ್ನಾಗರದ ಶಿಹೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಕೆಲವರು ಮಹಿಳೆ ಮಲಗಿದ್ದ ಬೆಡ್‌ನ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ ಅಲ್ಲಿಗೆ ವೈದ್ಯ ಜೈದೀಪ್ ಸಿನ್ಹಾ ಗೋಹಿಲ್ ಅವರು ಬಂದಿದ್ದು, ಅಲ್ಲಿದ್ದವರಿಗೆ ತಮ್ಮ ಚಪ್ಪಲಿ ಹೊರಗಿಟ್ಟು ಒಳಗೆ ಬರುವಂತೆ ಹೇಳಿದ್ದಾರೆ. ಆದರೆ ವೈದ್ಯನ ಮಾತು ಕೇಳದ ಮಹಿಳೆಯ ಸಂಬಂಧಿಕರು ವೈದ್ಯರ ಜೊತೆ ತೀವ್ರ ವಾಗ್ವಾದ ನಡೆಸಿದ್ದಾರೆ. ಈ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿದ್ದು, ವೈದ್ಯನ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ. ಈ ವೇಳೆ ಬೆಡ್ ಮೇಲೆ ಮಲಗಿದ್ದ ಮಹಿಳೆ ಹಾಗೂ ಎಮರ್ಜೆನ್ಸಿ ರೂಮ್‌ನಲ್ಲಿ ನರ್ಸ್ ಕೂಡ ಈ ಜಗಳ ಬಿಡಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಸಿಸಿಟಿವಿ ಅಪ್ ಮಾಡಿ, ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯನ ಮರ್ಮಾಂಗಕ್ಕೆ ಬ್ಲೇಡ್‌ನಿಂದ ಕುಯ್ದ ನರ್ಸ್
ಈ ಮಾರಾಮಾರಿಯಿಂದಾಗಿ ಅಲ್ಲಿದ್ದ ಔಷಧಿ ಹಾಗೂ ವೈದ್ಯಕೀಯ ಉಪಕರಣಗಳಿಗೂ ಹಾನಿಯಾಗಿದೆ. ಹೀಗೆ ವೈದ್ಯೆಯ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳನ್ನು ಭವ್ದೀಪ್ ಡಂಗರ್, ಕೌಶಿಕ್ ಕುವದಿಯಾ,ಹಿರೆನ್ ಡಂಗರ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಈಗ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 351(3), ಸೆಕ್ಷನ್ 115(2) ಹಾಗೂ 352ರ ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.