ನವದೆಹಲಿ(ಅ.06): ಮನುಷ್ಯ ಆರೋಗ್ಯವಾಗಿರಲು ದಿನಕ್ಕೆ 7ರಿಂದ 8 ಗಂಟೆ ನಿದ್ದೆ ಮಾಡಬೇಕು ಎಂದು ವೈದ್ಯರು ಹೇಳಿದರೆ, ಭಾರತೀಯರು ಸರಾಸರಿ ದಿನಕ್ಕೆ 9 ತಾಸು ನಿದ್ದೆ ಮಾಡುತ್ತಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಅಂಕಿ-ಅಂಶ ಕಚೇರಿ (ಎನ್‌ಎಸ್‌ಒ) ನಡೆಸಿದ ಈ ಮಾದರಿಯ ಮೊಟ್ಟಮೊದಲ ‘ಸಮಯ ಬಳಕೆ ಸಮೀಕ್ಷೆ’ಯಲ್ಲಿ ಈ ಅಂಶ ಪತ್ತೆಯಾಗಿದೆ. ಭಾರತೀಯರು ಪ್ರತಿದಿನ ಸರಾಸರಿ 552 ನಿಮಿಷ ಅಥವಾ 9.2 ತಾಸು ನಿದ್ದೆ ಮಾಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಪುರುಷರು 554 ನಿಮಿಷ ಹಾಗೂ ಮಹಿಳೆಯರು 557 ನಿಮಿಷ ನಿದ್ದೆ ಮಾಡುತ್ತಾರೆ. ನಗರ ಪ್ರದೇಶದಲ್ಲಿ ಪುರುಷರು 534 ನಿಮಿಷ ಹಾಗೂ ಮಹಿಳೆಯರು 552 ನಿಮಿಷ ನಿದ್ದೆ ಮಾಡುತ್ತಾರೆ ಎಂದು ತಿಳಿದುಬಂದಿದೆ.

ಇನ್ನು, ಆಹಾರ ಸೇವಿಸಲು ಗ್ರಾಮೀಣ ಪ್ರದೇಶದಲ್ಲಿ ಪುರುಷರು ದಿನಕ್ಕೆ 103 ನಿಮಿಷ ಖರ್ಚು ಮಾಡಿದರೆ, ಮಹಿಳೆಯರು 94 ನಿಮಿಷ ಖರ್ಚು ಮಾಡುತ್ತಾರೆ. ನಗರ ಪ್ರದೇಶದಲ್ಲಿ ಪುರುಷರು ಆಹಾರ ಸೇವಿಸಲು 101 ನಿಮಿಷ ವ್ಯಯಿಸಿದರೆ, ಮಹಿಳೆಯರು 97 ನಿಮಿಷ ವ್ಯಯಿಸುತ್ತಾರೆ.

2019ರ ಜನವರಿ ಮತ್ತು ಡಿಸೆಂಬರ್‌ ನಡುವೆ ದೇಶದ ಎಲ್ಲಾ ರಾಜ್ಯಗಳ ಒಟ್ಟು 1,38,799 ಮನೆಗಳ 4,47,250 ಜನರನ್ನು ಸಂದರ್ಶಿಸಿ ಸಮೀಕ್ಷೆ ನಡೆಸಲಾಗಿದೆ.