ಕಚೇರಿಗಳಲ್ಲಿ ಮಾಸ್ಕ್, ಅಂತರ ಕಡ್ಡಾಯ: ಸರ್ಕಾರದಿಂದ ಮಾರ್ಗಸೂಚಿ!
ತಗ್ಗಿದ ಕೊರೋನಾ ಹಾವಳಿ| ಕಚೇರಿಗಳಲ್ಲಿ ಮಾಸ್ಕ್, ಅಂತರ ಕಡ್ಡಾಯ| ಕಚೇರಿಗಳಿಗೆಂದೇ ಸರ್ಕಾರದಿಂದ ಮಾರ್ಗಸೂಚಿ
ನವದೆಹಲಿ(ಫೆ.15): ಕೊರೋನಾ ಹಾವಳಿ ತಗ್ಗುತ್ತಿರುವ ಬೆನ್ನಲ್ಲೇ ವರ್ಕ್ ಫ್ರಂ ಹೋಂ ಮುಗಿದು ಖಾಸಗಿ ಕಂಪನಿಗಳ ಉದ್ಯೋಗಿಗಳು ಕಚೇರಿಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಕಚೇರಿಗಳಿಗೆಂದೇ ಪ್ರತ್ಯೇಕ ಮಾರ್ಗಸೂಚಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಸಾಮಾನ್ಯ ಮಾರ್ಗಸೂಚಿ ಮತ್ತು ನಿರ್ದಿಷ್ಟಮಾರ್ಗಸೂಚಿ ಎಂಬ ವರ್ಗೀಕರಣ ಮಾಡಿ ನಿಯಮಗಳ ಅನುಷ್ಠಾನಕ್ಕೆ ಸೂಚಿಸಿದೆ.
ಸಾಮಾನ್ಯ ಮಾರ್ಗಸೂಚಿಯಡಿ ಮಾಸ್ಕ್, 6 ಅಡಿ ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಮತ್ತು ಬಳಸಿದ ಟಿಶ್ಯೂಗಳ ಸರಿಯಾದ ವಿಲೇವಾರಿಯನ್ನು ಕಡ್ಡಾಯ ಮಾಡಲಾಗಿದೆ. ಹಾಗೆಯೇ ಕಚೇರಿ ವ್ಯಾಪ್ತಿಯಲ್ಲಿ ಉಗುಳುವುದನ್ನು ನಿಷಿದ್ಧ ಮಾಡಲಾಗಿದೆ. ಅಲ್ಲದೆ ಕಂಪನಿಯ ಎಲ್ಲಾ ಉದ್ಯೋಗಿಗಳೂ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯಗೊಳಿಸಲಾಗಿದೆ.
ನಿರ್ದಿಷ್ಟಮಾರ್ಗಸೂಚಿಯಡಿಯಲ್ಲಿ ಕಚೇರಿಯ ಪ್ರವೇಶ ದ್ವಾರಲ್ಲಿ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ದಿನಕ್ಕೆ ಎರಡು ಬಾರಿ ಕಚೇರಿಯನ್ನು ಸ್ಯಾನಿಟೈಸ್ ಮಾಡಲು ಮತ್ತು ಸಭೆಯಗಳನ್ನು ಆದಷ್ಟು ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಡೆಸಲು ಸೂಚಿಸಲಾಗಿದೆ. ಉಳಿದಂತೆ ಕಂಟೈನ್‌ಮೆಂಟ್ ಝೋನ್‌ನಲ್ಲಿರುವ ಕಚೇರಿಗಳನ್ನು ತೆರೆಯುವಂತಿಲ್ಲ, ಅಲ್ಲಿ ಇರುವ ಉದ್ಯೋಗಿಗಳೂ ಕಚೇರಿಗೆ ಬರುವಂತಿಲ್ಲ ಎಂದು ತಿಳಿಸಲಾಗಿದೆ.