Asianet Suvarna News Asianet Suvarna News

ಒಡಿಶಾ ತ್ರಿವಳಿ ರೈಲು ದುರಂತ: ತುಂಬಿ ತುಳುಕುತ್ತಿರುವ ಶವಾಗಾರಗಳು: ಮೃತರ ಗುರುತು ಪತ್ತೆ ಆಗದೆ ಸಂಕಟ

ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ 270ಕ್ಕೂ ಹೆಚ್ಚು ಜನ ಮೃತರಾಗಿದ್ದು, ಸ್ಥಳೀಯ ಆಸ್ಪತ್ರೆಗಳ ಶವಾಗಾರಗಳು ತುಂಬಿ ತುಳುಕುತ್ತಿವೆ. ಅನೇಕ ಶವಗಳ (dead Body) ಗುರುತು ಪತ್ತೆ ಆಗಿಲ್ಲ

Odisha Triple Train Tragedy Overcrowded Mortuaries Suffer Without Identification of dead body akb
Author
First Published Jun 5, 2023, 7:35 AM IST

ಭುವನೇಶ್ವರ: ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ 270ಕ್ಕೂ ಹೆಚ್ಚು ಜನ ಮೃತರಾಗಿದ್ದು, ಸ್ಥಳೀಯ ಆಸ್ಪತ್ರೆಗಳ ಶವಾಗಾರಗಳು ತುಂಬಿ ತುಳುಕುತ್ತಿವೆ. ಅನೇಕ ಶವಗಳ (dead Body) ಗುರುತು ಪತ್ತೆ ಆಗಿಲ್ಲ. ಇನ್ನು ಕೆಲವರ ಶವಗಳ ಗುರುತು ಪತ್ತೆ ಆದರೂ ಸ್ವೀಕರಿಸಲು ಬಂಧುಗಳು ಬಂದಿಲ್ಲ. ಹೀಗಾಗಿ ಸಮಸ್ಯೆ ಆಗಿದೆ.

ಕುಟುಂಬಸ್ಥರ ಮೃತದೇಹಗಳನ್ನು ಹುಡುಕಿ ಬರುವ ಹೆಚ್ಚಿನ ಸಂಖ್ಯೆಯ ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ಒಡಿಶಾ ಸರ್ಕಾರ ಬಾಲಸೋರ್‌ ಜಿಲ್ಲಾಸ್ಪತ್ರೆಯಿಂದ ಭುವನೇಶ್ವರಕ್ಕೆ 187 ಶವಗಳನ್ನು ಸ್ಥಳಾಂತರಿಸಿತ್ತು. ಆದರೆ ಇಲ್ಲಿಯೂ ಕೂಡ ಶವಾಗಾರದಲ್ಲಿ ಸ್ಥಳಾವಕಾಶದ ಕೊರತೆಯಾಗಿ ಈ ಪೈಕಿ 110 ಶವಗಳನ್ನು ಭುವನೇಶ್ವರ ಏಮ್ಸ್‌ ಆಸ್ಪತ್ರೆಯಲ್ಲಿ (AIMS Hospital), ಉಳಿದವುಗಳನ್ನು ಕೆಲವು ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

Odisha train accident: ಕರ್ನಾಟಕದಲ್ಲಿ 3 ತಿಂಗಳ ಹಿಂದೆ ತಪ್ಪಿತ್ತು ಒಡಿಶಾ ರೀತಿ ದುರಂತ!

ಕೋಲ್ಡ್‌ ಸ್ಟೋರೇಜ್‌ (Cold Storage) ಶವಾಗಾರವು ಗರಿಷ್ಠ 40 ಶವಗಳನ್ನಿಡುವ ಸಾಮರ್ಥ್ಯ ಹೊಂದಿದ್ದು ಸದ್ಯ ಮೃತದೇಹಗಳನ್ನಿಡುವುದೇ ಸವಾಲಾಗಿದೆ ಎಂದು ಭುವನೇಶ್ವರ ಜಿಲ್ಲಾ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಕುಟುಂಬಸ್ಥರು ಬಂದು ಶವಗಳನ್ನು ಗುರುತಿಸುವವರೆಗೂ ರಸಾಯನಿಕಗಳ ಮೂಲಕ ಶವಗಳನ್ನು ಸಂರಕ್ಷಿಸಲಾಗುವುದು. ಈ ಬೇಸಿಗೆಯಲ್ಲಿ ಶವಸಂರಕ್ಷಣೆ ನಿಜಕ್ಕೂ ಕಷ್ಟಕರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಡಿಶಾ ರೈಲು ದುರಂತ; ಸಿಬಿಐ ತನಿಖೆಗೆ ಶಿಫಾರಸು ಮಾಡಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್! 

ಅಪಘಾತದ ಮೊದಲ ಮಾಹಿತಿ ನೀಡಿದ್ದು ಎನ್‌ಡಿಆರ್‌ಎಫ್‌ ಸಿಬ್ಬಂದಿ

ಭುವನೇಶ್ವರ: ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದ ಬಗ್ಗೆ ಮೊದಲು ರಕ್ಷಣಾ ಪಡೆಗಳಿಗೆ ಮಾಹಿತಿ ನೀಡಿದ್ದು ರೈಲಿನಲ್ಲಿಯೇ ಇದ್ದ ಎನ್‌ಡಿಆರ್‌ಎಫ್‌ ಪೇದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ವೆಂಕಟೇಶ್‌.ಎನ್‌.ಕೆ. ಎಂಬುವರು ತಮಿಳುನಾಡು ಮೂಲದವರಾಗಿದ್ದು ಕೋಲ್ಕತಾದಲ್ಲಿ ಎನ್‌ಡಿಆರ್‌ಎಫ್‌ 2ನೇ ಪಡೆಯಲ್ಲಿ ಪೇದೆ ಆಗಿದ್ದರು. ತಮ್ಮ ರಜೆ ಕಾರಣ ಕೋರಮಂಡಲ ರೈಲಿನ ಬಿ7 ಬೋಗಿಯಲ್ಲಿ ಚೆನ್ನೈಗೆ ತೆರಳುತ್ತಿದ್ದರು. ಅಪಘಾತ ಸಂಭವಿಸಿದ ತಕ್ಷಣವೇ ಇವರು ತಮ್ಮ ಮುಖ್ಯಸ್ಥರಿಗೆ ಕರೆ ಮಾಡಿ ಲೈವ್‌ ಲೊಕೇಷನ್‌ ಮಾಹಿತಿ ನೀಡಿದ್ದರು.

ಈ ಕುರಿತು ಮಾತನಾಡಿದ ಅವರು, ನಾನು ರೈಲಿನಲ್ಲಿದ್ದಾಗ ರೈಲು ಏಕಾಏಕಿ ಪಲ್ಟಿಯಾಗತೊಡಗಿತು. ಆಗ ಅದರಲ್ಲಿದ್ದ ಜನರೆಲ್ಲ ಕೆಳಗೆ ಬೀಳುತ್ತಿದ್ದರು. ನೋಡಿದಾಗ ರೈಲು ಅಪಘಾತವಾಗಿತ್ತು. ಕೂಡಲೇ ಕೋಲ್ಕತಾದ ಎನ್‌ಡಿಆರ್‌ಎಫ್‌ ಮುಖ್ಯಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿ ಅಪಘಾತ ಸ್ಥಳದ ಲೈವ್‌ ಲೊಕೇಷನ್‌ ಹಂಚಿಕೊಂಡೆ. ಬಳಿಕ ರಕ್ಷಣಾ ಪಡೆಗಳು ಬರುವಷ್ಟರಲ್ಲಿ ರೈಲಿನಲ್ಲಿದ್ದ ಜನರನ್ನು ಸ್ಥಳೀಯರ ಸಹಾಯದೊಂದಿಗೆ ಹೊರಗೆ ತಂದು ಕೂರಿಸುತ್ತಿದ್ದೆ ಎಂದು ಹೇಳಿದರು.

ರೈಲು ದುರಂತದಲ್ಲಿ ಮೃತರು 288 ಅಲ್ಲ, 275 ಒಡಿಶಾ ಸರ್ಕಾರ

ಭುವನೇಶ್ವರ: ಒಡಿಶಾದಲ್ಲಿ ಶುಕ್ರವಾರ ನಡೆದ ಭೀಕರ ರೈಲು ದುರಂತದಿಂದ ಮೃತರಾದವರ ಸಂಖ್ಯೆಯು 288 ಅಲ್ಲ, 275 ಎಂದು ಒಡಿಶಾ ಸರ್ಕಾರ ಅಧಿಕೃತ ಹೇಳಿಕೆ ನೀಡಿದೆ. ಈ ಮೊದಲು ಕೆಲವು ಶವಗಳನ್ನು ಎರಡು ಬಾರಿ ಎಣಿಕೆ ಮಾಡಿದ್ದರ ಪರಿಣಾಮ ಸಾವಿನ ಸಂಖ್ಯೆ 288 ಎಂದು ತಪ್ಪು ಲೆಕ್ಕ ಹಾಕಲಾಗಿತ್ತು. ಆದರೆ ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಸಂಪೂರ್ಣ ವರದಿ ತರಿಸಿ ಮೃತರ ಸಂಖ್ಯೆಯನ್ನು 275 ಎಂದು ಖಾತರಿಪಡಿಸಲಾಗಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ಕೆ. ಜೇನಾ ಹೇಳಿದ್ದಾರೆ.

ಈವರೆಗೂ 793 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, 382 ಜನರಿಗೆ ಇನ್ನೂ ಚಿಕಿತ್ಸೆ ನಡೆಯುತ್ತಿದೆ. 88 ಶವಗಳ ಗುರುತು ಪತ್ತೆಹಚ್ಚಿದ್ದು, ಅದರಲ್ಲಿ 78 ಮೃತರನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಇನ್ನು 187 ಗುರುತು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

Follow Us:
Download App:
  • android
  • ios