* ಪ್ರವಾದಿ ಮೊಹಮ್ಮದ್ ನಿಂದನೆಗೆ ಸಂಬಂಧಿಸಿದಂತೆ ನೂಪುರ್ ಶರ್ಮಾಗೆ ಸಮನ್ಸ್* ವಿಚಾರಣೆಗೆ ಹಾಜರಾಗದ ನೂಪುರ್ ವಿರುದ್ಧ ಲುಕೌಟ್ ನೋಟಿಸ್* ಪ್ರವಾದಿ ನಿಂದನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವು ಠಾಣೆಗಳಲ್ಲಿ ನೂಪುರ್ ಶರ್ಮಾ ಅವರ ವಿರುದ್ಧ ಪ್ರಕರಣ ದಾಖಲು
ಕೋಲ್ಕತಾ(ಜು,03): ಪ್ರವಾದಿ ಮೊಹಮ್ಮದ್ ನಿಂದನೆಗೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ 4ನೇ ಬಾರಿ ಕೋಲ್ಕತಾ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ æೂೕಲ್ಕತಾ ಪೊಲೀಸರು ಅವರಿಗಾಗಿ ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.
‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಅಮರೆಸ್ಟ್ ಸ್ಟ್ರೀಟ್ ಮತ್ತು ನರ್ಕೇಲ್ಡಂಗಾ ಪೊಲೀಸ್ ಠಾಣೆಗಳಿಂದ ಎರಡೆರಡು ಬಾರಿ ಸಮನ್ಸ್ ಜಾರಿ ಮಾಡಿದರೂ ಸಹ ನೂಪುರ್ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಲುಕೌಟ್ ನೋಟಿಸ್ ನೀಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರವಾದಿ ನಿಂದನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವು ಠಾಣೆಗಳಲ್ಲಿ ನೂಪುರ್ ಶರ್ಮಾ ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.
ನೂಪುರ್‌ರಿಂದ ದೇಶಕ್ಕೇ ಬೆಂಕಿ: ಸುಪ್ರೀಂ!
ಪ್ರವಾದಿ ಮೊಹಮ್ಮದರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಅತ್ಯಂತ ಕಟುನುಡಿಗಳಲ್ಲಿ ತರಾಟೆಗೆ ತೆಗೆದುಕೊಂಡಿರುವ ಸರ್ವೋಚ್ಚ ನ್ಯಾಯಾಲಯ, ‘ನೂಪುರ್ ಶರ್ಮಾ ಅವರ ‘ನಿಯಂತ್ರಣವಿಲ್ಲದ ನಾಲಗೆ’ (ಹರಕು ಬಾಯಿ) ಇಂದು ಇಡೀ ದೇಶಕ್ಕೇ ಬೆಂಕಿ ಹಚ್ಚಿದೆ. ಇಡೀ ದೇಶದಲ್ಲಿ ಏನಾಗುತ್ತಿದೆಯೋ ಅದಕ್ಕೆಲ್ಲಾ ಆಕೆ ಏಕಾಂಗಿಯಾಗಿ ಹೊಣೆ ಎಂದು ಕಿಡಿಕಾರಿದೆ.
ತಮ್ಮ ಹೇಳಿಕೆ ವಿರುದ್ಧ ದೇಶದ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಂದುಗೂಡಿಸಿ ವಿಚಾರಣೆ ನಡೆಸಬೇಕು ಎಂದು ನೂಪುರ್ ಕೋರಿಕೆಯನ್ನೂ ತಿರಸ್ಕರಿಸಿರುವ ನ್ಯಾ
ಸೂರ್ಯಕಾಂತ್ ಹಾಗೂ ನ್ಯಾ| ಜೆ.ಬಿ. ಪರ್ದೀವಾಲಾ ಅವರ ಪೀಠ, ‘ಈ ಹೇಳಿಕೆಯನ್ನು ಪುಕ್ಕಟೆ ಪ್ರಚಾರಕ್ಕೆ ಹಾಗೂ ರಾಜಕೀಯ ಉದ್ದೇಶದಿಂದ ನೀಡಿದ್ದಾರೆ. ಇಂಥ ಹಿಡಿತವಿಲ್ಲದ ನಾಲಿಗೆಯಿಂದ ಹೊರಬಿದ್ದ ಮಾತಿನಿಂದ ಇಂದು ಇಡೀ ದೇಶಕ್ಕೇ ಬೆಂಕಿ ಬಿದ್ದಿದೆ. ಆದರೂ ತಾನೊಬ್ಬ 10 ವರ್ಷದಿಂದ ವಕೀಲೆಯಾಗಿರುವೆ ಎಂದು ಅವರು ಹೇಳಿಕೊಳ್ಳುತ್ತಾರೆ. ಹೇಳಿಕೆ ನೀಡಿದ ಕೂಡಲೇ ಅವರು ಈ ದೇಶದ ಕ್ಷಮೆ ಯಾಚಿಸಬೇಕಿತ್ತು’ ಎಂದಿತು.
ನೂಪುರ್ ಅವರು ಟೀವಿ ಚಾನೆಲ್ ಒಂದರಲ್ಲಿ ನಡೆದ ಸಂವಾದದಲ್ಲಿ ಪ್ರವಾದಿ ವಿರುದ್ಧ ಹೇಳಿಕೆ ನೀಡಿದ್ದರು. ಇದು ದೇಶ-ವಿದೇಶಗಳಲ್ಲಿ ಪ್ರತಿಧ್ವನಿಸಿತ್ತು. ನಂತರ ನೂಪುರ್ ‘ಷರತ್ತಿನ ಕ್ಷಮೆ’ ಯಾಚಿಸಿದ್ದರು ಹಾಗೂ ಅವರನ್ನು ಪಕ್ಷದಿಂದ ಬಿಜೆಪಿ ಅಮಾನತು ಮಾಡಿತ್ತು.
ಅಹಂಕಾರದ ಹೇಳಿಕೆ- ಕೋರ್ಟ್ ಕಿಡಿ:
ಸುಮಾರು 30 ನಿಮಿಷದ ಕಲಾಪದಲ್ಲಿ ನೂಪುರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪೀಠ, ‘ನೂಪುರ್ ಹೇಳಿಕೆ ಆಘಾತಕಾರಿ ಹಾಗೂ ಅಹಂಕಾರದ ಪರಮಾವಧಿ. ಇಂಥ ಹೇಳಿಕೆ ನೀಡಲು ಅವರಿಗೆ ಯಾವ ಅಧಿಕಾರವಿದೆ? ಅವರ ಈ ಹೇಳಿಕೆಯಿಂದ ದೇಶದಲ್ಲಿ ದುರದೃಷ್ಟಕರ ಘಟನೆಗಳು ನಡೆದವು. ಇಂಥ ವ್ಯಕ್ತಿಗಳು ಧಾರ್ಮಿಕ ಮನೋಭಾವ ಹೊಂದಿದವರಲ್ಲ ಹಾಗೂ ಇತರ ಧರ್ಮಗಳ ಬಗ್ಗೆಯೂ ಇವರು ಗೌರವ ಹೊಂದಿಲ್ಲ. ಪುಕ್ಕಟೆ ಪ್ರಚಾರಕ್ಕಾಗಿ ಅಥವಾ ರಾಜಕೀಯ ದುರುದ್ದೇಶಕ್ಕಾಗಿ ನೀಡಿದ ಹೇಳಿಕೆ ಇವು. ತನಗೆ ರಾಜಕೀಯ ಶ್ರೀರಕ್ಷೆ ಇದೆ. ತನ್ನನ್ನು ಕಾನೂನಿನಿಂದ ಏನೂ ಮಾಡಲಾಗದು ಎಂಬ ಭ್ರಮೆ ಅವರಲ್ಲಿರಬಹುದು’ ಎಂದಿತು.
