ಕೋಲ್ಕತ್ತಾ (ಸೆ. 25) ಪರಮಾಣು ವಿಜ್ಞಾನಿ ಮತ್ತು ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಡಾ. ಶೇಖರ್ ಬಸು ಅವರು ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಮೂರು ದಿನಗಳ ಹಿಂದಷ್ಟೆ 68 ನೇ ವರ್ಷಕ್ಕೆ ಕಾಲಿಟ್ಟಿದ್ದ ಡಾ. ಬಸು ಕೊರೋನಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು.

ಮೂತ್ರಪಿಂಡದ ಕಾಯಿಲೆಯಿಂದಲೂ ಬಳಲುತ್ತಿದ್ದ ಅವರನ್ನು ಕೊರೋನಾ ಬಲಿ ಪಡೆದಿದೆ  ಎಂದು ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಾ. ಬಸು ಅವರಿಗೆ 2002 ರಲ್ಲಿ ಇಂಡಿಯನ್ ನ್ಯೂಕ್ಲಿಯರ್ ಸೊಸೈಟಿ ಪ್ರಶಸ್ತಿ ಮತ್ತು 2014 ರಲ್ಲಿ ಪದ್ಮಶ್ರೀ ಪುರಸ್ಕಾರ ದೊರೆತಿತ್ತು. ಭಾರತದ ಮೊದಲ ಪರಮಾಣು-ಚಾಲಿತ ಜಲಾಂತರ್ಗಾಮಿ ಐಎನ್ಎಸ್ ಅರಿಹಂತ್‌ಗೆ ಅವರು ಅತ್ಯಂತ ಸಂಕೀರ್ಣವಾದ ರಿಯಾಕ್ಟರ್ ಅನ್ನು ತಯಾರಿಸಿ ನೀಡಿದ್ದರು. ತಾರಾಪುರ ಮತ್ತು ಕಲ್ಪಕ್ಕಂನಲ್ಲಿನ ಪರಮಾಣು ಮರುಬಳಕೆ ಘಟಕಗಳ ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಾಚರಣೆಯ ಹಿಂದೆ ಇವರ ಕೊಡುಗೆ ಇತ್ತು. ತಮಿಳುನಾಡಿನ ಭಾರತೀಯ ನ್ಯೂಟ್ರಿನೊ ವೀಕ್ಷಣಾಲಯದ ಅಭಿವೃದ್ಧಿಯಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಿದ್ದರು.

SPB ಲವ್‌ ಸ್ಟೋರಿ; ಕಿಡ್ನಾಪ್ ಮಾಡಿ ಸಾವಿತ್ರಿ ವಿವಾಹವಾಗಿದ್ದರು!

ವಿಜ್ಞಾನಿಯ ನಿಧನಕ್ಕೆ ರಾಷ್ಟ್ರಪತಿ  ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಸಿಎಂಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.

ಸೆಪ್ಟೆಂಬರ್ 20, 1952 ರಂದು ಜನಿಸಿದ ಡಾ. ಬಸು ಕೋಲ್ಕತ್ತಾದ ಬ್ಯಾಲಿಗಂಜ್ ಸರ್ಕಾರಿ ಶಾಲೆಯಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು 1974 ರಲ್ಲಿ ಮುಂಬೈ ವಿಶ್ವವಿದ್ಯಾಲಯದ ವೀರ್ಮಾಟಾ ಜಿಜಾಬಾಯ್ ಟೆಕ್ನಾಲಜಿಕಲ್ ಇನ್ಸ್ಟಿಟ್ಯೂಟ್ (ವಿಜೆಟಿಐ) ಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು.

ಬಾಬಾ ಪರಮಾಣು ಸಂಶೋಧನಾ ಕೇಂದ್ರ (ಬಾರ್ಕ್) ಶಾಲೆಯಲ್ಲಿ ಪರಮಾಣು ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಒಂದು ವರ್ಷದ ತರಬೇತಿಯ ನಂತರ, ಅವರು 1975 ರಲ್ಲಿ ಅದರ ರಿಯಾಕ್ಟರ್ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿದರು.

2012 ರಲ್ಲಿ BARC ಅಧ್ಯಕ್ಷರಾಗುವ ಮುನ್ನ ಪರಮಾಣು ಜಲಾಂತರ್ಗಾಮಿ ಕಾರ್ಯಕ್ರಮದ ಯೋಜನಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು.