* ಮತ್ತೆ ಸದ್ದು ಮಾಡುತ್ತಿದೆ ಸರ್ಜಿಕಲ್ ಸ್ಟ್ರೈಕ್ ವಿಚಾರ* ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷಿ ಕೇಳಿದ ಕೆಸಿಆರ್* ಬಿಜೆಪಿ ವಿರುದ್ಧವೂ ಕಿಡಿ ಕಾರಿದ ಕೆಸಿಆರ್
ಹೈದರಾಬಾದ್(ಫೆ.14): ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬಳಿಕ ಇದೀಗ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಭಾರತೀಯ ಸೇನೆಯ ಮೇಲೆ ಸವಾಲೆತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕೆಸಿಆರ್, ರಾಹುಲ್ ಗಾಂಧಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆ ಕೇಳಿದ್ದರಲ್ಲಿ ತಪ್ಪೇನಿದೆ? ನನಗೂ ಬೇಕು, ಕೇಂದ್ರ ಸರ್ಕಾರ ಸಾಕ್ಷಿ ಕೊಡಲಿ ಎಂದಿದ್ದಾರೆ.
Surgical Strike ನಡೆದಿದ್ದಕ್ಕೆ ಸಾಕ್ಷಿ ಕೊಡಿ, ರಾಹುಲ್ ಬಳಿಕ ಸೇನೆ ಬಗ್ಗೆ ಪ್ರಶ್ನೆ ಎತ್ತಿದ ತೆಲಂಗಾಣ ಸಿಎಂ ಕೆಸಿಆರ್
ಇತ್ತೀಚೆಗಷ್ಟೇ ಉತ್ತರಾಖಂಡದಲ್ಲಿ ನಡೆದ ರ್ಯಾಲಿಯಲ್ಲಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ರಾಹುಲ್ ಗಾಂಧಿ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದರು. ಅವರು (ರಾಹುಲ್ ಗಾಂಧಿ) ನಮ್ಮ ಸೇನೆಯಿಂದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆ ಕೇಳುತ್ತಾರೆ ಎಂದ ಅವರು, ನಾವು ಎಂದಾದರೂ ನೀವು ರಾಜೀವ್ ಗಾಂಧಿ ಅವರ ಮಗ ಅಥವಾ ಅಲ್ಲ ಎಂಬುದಕ್ಕೆ ಪುರಾವೆ ಕೇಳಿದ್ದೇವೆಯೇ? ನನ್ನ ಸೇನೆಯಿಂದ ಪುರಾವೆ ಕೇಳಲು ನಿಮಗೆ ಯಾವ ಹಕ್ಕಿದೆ? ಎಂದು ಪ್ರಶ್ನಿಸಿದ್ದರು.
ರಾಹುಲ್ ರಕ್ಷಣೆಗೆ ಕೆಸಿಆರ್
ಹಿಮಂತ ಅವರ ಈ ಮಾತಿಗೆ ಕೆಸಿಆರ್ ವಿರೋಧ ವ್ಯಕ್ತಪಡಿಸಿದ್ದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಹುಲ್ ಗಾಂಧಿ ಅವರ ಬಗ್ಗೆ ಮಾಡಿದ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕೆಸಿಆರ್ ಹೇಳಿದ್ದಾರೆ. ಅವರ ಪಕ್ಷದಿಂದಲೂ ಅಲ್ಲ, ಅವರು ಕುಟುಂಬದ ಇತಿಹಾಸ ಹೊಂದಿರುವ ಸಂಸದ. ಹೀಗಿರುವಾಗ ಅವರ ಬಗ್ಗೆ ಕೊಟ್ಟ ಅಂತಹ ಹೇಳಿಕೆಗೆ ಅಸ್ಸಾಂ ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು ಎಂದಿದ್ದಾರೆ.
ರಾಹುಲ್ ಯಾವುದೇ ತಪ್ಪು ಮಾಡಿಲ್ಲ
ಈ ಕುರಿತು ಹಿಮಂತ ಬಿಸ್ವಾ ಶರ್ಮಾ ಅವರು ಕೆಸಿಆರ್ ಅವರನ್ನು ಪ್ರಶ್ನಿಸಿದ್ದು, ಸೇನೆ ಮತ್ತು ಸರ್ಜಿಕಲ್ ಸ್ಟ್ರೈಕ್ ಕುರಿತು ರಾಹುಲ್ ಪ್ರಶ್ನೆ ಎತ್ತಿದಾಗ ರಾಹುಲ್ ಗಾಂಧಿಗೆ ಏಕೆ ಪ್ರಶ್ನೆಗಳನ್ನು ಕೇಳಲಿಲ್ಲ ಅಥವಾ ಟ್ವೀಟ್ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ರಾವ್ ಕೂಡ ರಾಹುಲ್ ಗಾಂಧಿಯವರ ಧ್ವನಿಯನ್ನು ಮತ್ತೆ ಎತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ, ಹಿಮಂತ ಅವರ ಈ ಉತ್ತರದ ಬಗ್ಗೆ ಮಾಧ್ಯಮಗಳು ಅವರನ್ನು ಪ್ರಶ್ನಿಸಿದಾಗ, ಮತ್ತೊಮ್ಮೆ ಕೆಸಿಆರ್ ರಾಹುಲ್ ಅವರನ್ನು ಸಮರ್ಥಿಸಿಕೊಳ್ಳುತ್ತಾ, ರಾಹುಲ್ ಗಾಂಧಿ ಯಾವ ತಪ್ಪೂ ಮಾಡಿಲ್ಲ, ಕೇಳಬಾರದ್ದನ್ನು ಕೇಳಿಲ್ಲ. ಅದರಲ್ಲಿ ಏನು ತಪ್ಪಿದೆ. ನಾನು ಕೂಡ ಕೇಳುದ್ದೇನೆ. ಸಾಕ್ಷಿ ಕೊಡುವುದು ಸರ್ಕಾರದ ಜವಾಬ್ದಾರಿ. ದೇಶದ ಜನತೆಗೆ ಈ ಬಗ್ಗೆ ತಿಳಿಯಬೇಕು. ಬಿಜೆಪಿಯವರು ಸುಳ್ಳು ಪ್ರಚಾರ ಮಾಡುತ್ತಾರೆ, ಅದಕ್ಕೆ ಸಾಕ್ಷಿ ಕೇಳುತ್ತಿದ್ದಾರೆ ಎಂದಿದ್ದಾರೆ.
ಮೋದಿ, ನಡ್ಡಾ ಅವರನ್ನು ವಜಾ ಮಾಡುವಂತೆ ಒತ್ತಾಯ
ರಾಹುಲ್ ಗಾಂಧಿ ಅವರ ಹೇಳಿಕೆಗಾಗಿ ಅಸ್ಸಾಂ ಮುಖ್ಯಮಂತ್ರಿಯನ್ನು ವಜಾಗೊಳಿಸುವಂತೆ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಒತ್ತಾಯಿಸಿದ್ದರು. ಪ್ರಧಾನಿ ಮೋದಿ ಜೀ, ಇದು ಸಂಸ್ಕಾರವೇ ಅಥವಾ ನಮ್ಮ ಹಿಂದೂ ಧರ್ಮವೇ ಸಂಸದರೊಬ್ಬರ ತಂದೆಯ ಗುರುತನ್ನು ಪ್ರಶ್ನಿಸುವುದು ಎಂದು ಅವರು ಹೇಳಿದರು. ಇದನ್ನು ಮಾಡಿದ್ದು ನಿಮ್ಮ ಬಿಜೆಪಿ ಮುಖ್ಯಮಂತ್ರಿ. ಇದನ್ನು ಕೇಳಿ ನಾಚಿಕೆಯಿಂದ ತಲೆ ತಗ್ಗಿಸಿ ಕಣ್ಣಲ್ಲಿ ನೀರು ತುಂಬಿಕೊಂಡಿತು. ಇದು ದೇಶಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ.
ಪುಲ್ವಾಮಾ ದಾಳಿಯ ಕರಾಳ ನೆನಪಿನ ಮಧ್ಯೆ ವಿಪಕ್ಷಗಳ ಕೆಟ್ಟ ನಡೆ
ಸದ್ಯ ಕೆಸಿಆರ್, ರಾಹುಲ್ ಗಾಂಧಿ ಬೆಂಬಲಿಸಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸವಾಲೆತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಹೀಗಿರುವಾಗ ಈ ಬಗ್ಗೆ ಟ್ವಿಟ್ ಮಾಡಿರುವ ಹಿಮಂತ ಬಿಸ್ವಾ ಶರ್ಮಾ ಪುಲ್ವಾಮಾ ದಾಳಿಯ ವರ್ಷಾಚರಣೆಯ ಸಂದರ್ಭದಲ್ಲಿ ಪ್ರತಿಪಕ್ಷಗಳು ಸರ್ಜಿಕಲ್ ಸ್ಟ್ರೈಕ್ ಅನ್ನು ಮತ್ತೊಮ್ಮೆ ಪ್ರಶ್ನಿಸುವ ಮೂಲಕ ನಮ್ಮ ಹುತಾತ್ಮರನ್ನು ಅವಮಾನಿಸಲಾರಂಭಿಸಿದ್ದಾರೆ. ಗಾಂಧಿ ಕುಟುಂಬಕ್ಕೆ ತಮ್ಮ ನಿಷ್ಠೆಯನ್ನು ಸಾಬೀತುಪಡಿಸಲು ಕೆಸಿಆರ್ ಮತ್ತು ಕಾಂಗ್ರೆಸ್ ಸ್ಪರ್ಧೆಯಲ್ಲಿದೆ. ನಮ್ಮ ನಿಷ್ಠೆ ಭಾರತದೊಂದಿಗೆ ಇದೆ. ಸಶಸ್ತ್ರ ಪಡೆಗಳನ್ನು ಪ್ರಶ್ನಿಸುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.
