ನವದೆಹಲಿ(ಫೆ.13): ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ರಾಜ್ಯಸಭಾ ಸಂಸದ ದಿನೇಶ್‌ ತ್ರಿವೇದಿ ಅವರು ತಮ್ಮ ಸಂಸತ್‌ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಪ್ರಶಂಸಿಸಿದ್ದು, ಅವರು ಬಿಜೆಪಿ ಸೇರ್ಪಡೆ ಆಗುವ ಸಾಧ್ಯತೆ ನಿಚ್ಚಳವಾಗಿದೆ. ಇದು ಟಿಎಂಸಿಗೆ ಮತ್ತೊಂದು ಹಿನ್ನಡೆಯಾಗಿದೆ.

ಶುಕ್ರವಾರ ರಾಜ್ಯಸಭೆಯಲ್ಲಿ ಬಜೆಟ್‌ ಕುರಿತಾದ ಚರ್ಚೆ ವೇಳೆಯೇ ತ್ರಿವೇದಿ ಅವರು, ‘ಟಿಎಂಸಿ ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣವಿದ್ದು, ಸಮಸ್ಯೆ ಹೇಳಿಕೊಳ್ಳುವಂತಿಲ್ಲ. ನಮ್ಮ ರಾಜ್ಯದಲ್ಲಿ ಭಾರೀ ಹಿಂಸೆ ನಡೆಯುತ್ತಿವೆ. ಇಂಥ ಹೊತ್ತಲ್ಲಿ ನಾನಿಲ್ಲಿ ಸುಮ್ಮನೇ ಕುಳಿತುಕೊಳ್ಳುವ ಬದಲು ರಾಜೀನಾಮೆ ನೀಡಿ, ಬಂಗಾಳಕ್ಕೆ ತೆರಳಿ ರಾಜ್ಯದ ಜನರೊಂದಿಗೆ ಇರುವುದೇ ಲೇಸು’ ಎಂದರು.

ಮಮತಾ ಬಗ್ಗೆ ಕಿಡಿ:

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಟಿಎಂಸಿ ಇದೀಗ ಮಮತಾ ಕೈಯಲ್ಲಿ ಉಳಿದಿಲ್ಲ. ರಾಜಕೀಯವೆಂದರೆ ಏನೆಂದೂ ತಿಳಿಯದ ಕಾರ್ಪೊರೇಟ್‌ ವೃತ್ತಿಪರರ ಕೈಯಲ್ಲಿ ಟಿಎಂಸಿ ಸಿಲುಕಿದೆ. ನಮ್ಮ ಧ್ವನಿಯನ್ನು ವ್ಯಕ್ತಪಡಿಸಲು ಪಕ್ಷದಲ್ಲಿ ವೇದಿಕೆಯೇ ಇಲ್ಲ. ಮಮತಾ ಅವರು ಪ್ರತೀ ಸಲವು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುತ್ತಾರೆ. ಆದರೆ ಪ್ರತೀ ಬಾರಿಯೂ ಪ್ರಧಾನಿಯನ್ನು ನಿಂದಿಸಬೇಕಿಲ್ಲ. ಅಸಮಾಧಾನಗಳನ್ನು ಗೌರವಯುತವಾಗಿ ಮಂಡಿಸಬಹುದು’ ಕಿಡಿಕಾರಿದರು. ಆದರೆ, ‘ಬಿಜೆಪಿಗೆ ಸೇರ್ಪಡೆಯಾಗುವಿರಾ’ ಪ್ರಶ್ನೆಗೆ ಮೌನ ತಾಳಿದರು.

ತ್ರಿವೇದಿ ನಂಬಿಕೆ ದ್ರೋಹಿ- ಟಿಎಂಸಿ:

ತ್ರಿವೇದಿ ಅವರ ರಾಜೀನಾಮೆಯನ್ನು ಟೀಕಿಸಿರುವ ರಾಜ್ಯಸಭೆಯ ಟಿಎಂಸಿ ಉಪ ನಾಯಕ ಸುಕೇಂದು ಶೇಖರ್‌ ರಾಯ್‌, ‘ತ್ರಿವೇದಿ ಓರ್ವ ಕೃತಘ್ನ ವ್ಯಕ್ತಿ. ಅವರು ಜನರ ನಂಬಿಕೆಗೆ ದ್ರೋಹ ಬಗೆದಿದ್ದಾರೆ’ ಎಂದಿದ್ದಾರೆ. ಇನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯ್‌ ವರ್ಗೀಯ, ಬಿಜೆಪಿಗೆ ಬರುವಂತೆ ತ್ರಿವೇದಿಗೆ ಆಹ್ವಾನಿಸಿದ್ದಾರೆ.

ಗುಜರಾತ್‌ನಿಂದ ರಾಜ್ಯಸಭೆಗೆ?:

ಈಗ ತ್ರಿವೇದಿ ಬಿಜೆಪಿ ಟಿಕೆಟ್‌ನಿಂದಲೇ ಗುಜರಾತ್‌ ವಿಧಾನಸಭೆ ಮೂಲಕ ಮತ್ತೆ ರಾಜ್ಯಸಭೆ ಪ್ರವೇಶಿಸಲಿದ್ದಾರೆ ಎಂದು ಗುಮಾನಿಗಳು ಎದ್ದಿವೆ. ತ್ರಿವೇದಿ ಮೂಲತಃ ಗುಜರಾತ್‌ನವರು.