* ಮಹಾರಾಷ್ಟ್ರದಲ್ಲಿ ಮುಂದುವರೆದ ರಾಜಕೀಯ ಹೈಡ್ರಾಮಾ* ಸುಪ್ರೀಂ ಅಂಗಳಕ್ಕೂ ತಲುಪಿದ ವಿವಾದ* ವಿವಾದದ ಮಧ್ಯೆ ನಾವು ರೆಬೆಲ್ ನಾಯಕರಲ್ಲ ಎಂದ ಕೇಸರಿನಾಥ್
ಮುಂಬೈ(ಜೂ.28): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದಿರುವ ಶಿವಸೇನೆ ಮುಖಂಡ ಏಕನಾಥ ಶಿಂಧೆ ಬಣದ ಪ್ರಮುಖ ಮುಖಂಡ, ಶಾಸಕ ದೀಪಕ್ ಕೇಸರಕರ್ ಅವರು ತಮ್ಮದು ಬಂಡಾಯವಲ್ಲ. ಶಿವಸೇನೆಯ ಆತ್ಮಗೌರವ ಕಾಯುವ ಹೋರಾಟ ಎಂದಿದ್ದಾರೆ.
ಸೋಮವಾರ ಸಂಜೆ ಬಹಿರಂಗ ಪತ್ರ ಬರೆದಿರುವ ಕೇಸರಕರ್, ‘ನಮ್ಮದು ಬಂಡಾಯವಲ್ಲ. ಶಿವಸೇನೆಯ ಆತ್ಮಗೌರವ ಕಾಪಾಡಲು ನಡೆದಿರುವ ಹೋರಾಟ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂದು ನಾವು ಉದ್ಧವ್ ಠಾಕ್ರೆ ಅವರನ್ನು ಕೋರುತ್ತೇವೆ. ಈ ಮೈತ್ರಿಯು ಮಹಾರಾಷ್ಟ್ರದ ಜನಾದೇಶ ಕೂಡ ಆಗಿದೆ’ ಎಂದಿದ್ದಾರೆ.
ಇದೇ ವೇಳೆ ಠಾಕ್ರೆ ಆಪ್ತ ಸಂಜಯ ರಾವುತ್ ವಿರುದ್ಧ ಹರಿಹಾಯ್ದಿರುವ ಅವರು, ‘ರಾವುತ್ ಎನ್‌ಸಿಪಿಯ ನೀಲಿಗಣ್ಣಿನ ಹುಡುಗ. ಶರದ್ ಪವಾರ್ ಜತೆ ಸೇರಿ ಶಿವಸೇನೆ ಮುಗಿಸಲು ಹೊರಟಿದ್ದಾರೆ. ನೀವು (ರಾವುತ್) ಶಿವಸೇನೆಯನ್ನು ಬಿಜೆಪಿಯಿಂದ ದೂರ ಸರಿಸುವಲ್ಲಿ ಯಶ ಕಾಣಬಹುದು. ಆದರೆ ಹಿಂದುತ್ವದಿಂದ ದೂರ ಸರಿಸಲು ಯತ್ನಿಸಿದರೆ ನಾವು ಹೇಗೆ ಸಹಿಸಬಲ್ಲೆವು? ಜಯ ಯಾವತ್ತೂ ನಮ್ಮದೇ’ ಎಂದು ಆಕ್ರೋಶಭರಿತರಾಗಿ ನುಡಿದಿದ್ದಾರೆ.
