Asianet Suvarna News Asianet Suvarna News

'ಸಿಂಗಾಪುರ ತಳಿ' ವಿವಾದ: ಕೇಜ್ರೀವಾಲ್‌ಗೆ ರಾಯಭಾರ ಕಚೇರಿಯ ಗುದ್ದು!

* ಸಿಂಗಾಪುರ ತಳಿ ವಿವಾದ: ಕೇಜ್ರೀವಾಲ್‌ ಹೇಳಿಕೆಗೆ ಸಿಂಗಾಪುರ ರಾಯಭಾರ ಕಚೇರಿ ತಿರುಗೇಟು

* ಸಿಂಗಾಪುರವಲ್ಲ ಭಾರತಲ್ಲೇ ಕಂಡು ಬಂದ ವೈರಸ್ ಎಂದ ಹೈಕಮಿಷನರ್ ಕಚೇರಿ

* ಎಚ್ಚರ ವಹಿಸುತ್ತೇವೆಂದ ನಾಗರಿಕ ವಿಮಾನಯಾನ ಸಚಿವ

Not New It Is India Dominant Variant Singapore On Arvind Kejriwal Tweet pod
Author
Bangalore, First Published May 19, 2021, 10:06 AM IST

ನವದೆಹಲಿ(ಮೇ. 19): ಸಿಂಗಾಪುರದಲ್ಲಿ ಪತ್ತೆಯಾದ ಕೊರೋನಾ ವೈರಸ್‌ನ ಹೊಸ ಪ್ರಭೇದವು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಸಮಸ್ಯೆ ಉಂಟು ಮಾಡಲಿದೆ ಎಂಬ ಭೀತಿ ಮಧ್ಯೆ ಸಿಂಗಾಪುರದಿಂದ ಭಾರತಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ವಿಮಾನ ಸೇವೆಗಳನ್ನು ರದ್ದುಗೊಳಿಸಬೇಕು ಎಂದು ದೆಹಲಿ ಮಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ. ಕೇಜ್ರೀವಾಲ್ ಹೇಳಿಕೆಗೆ ತಿರುಗೇಟು ನೀಡಿರುವ ಸಿಂಗಾಪುರ ರಾಯಭಾರ ಕಚೇರಿ ಇದು ಮೊದಲು ಪತ್ತೆಯಾಗಿದ್ದು ಭಾರತದಲ್ಲಿ, ಸದ್ಯ ಬೇರೆ ದೇಶಗಳಲ್ಲೂ ವರದಿಯಾಗುತ್ತಿದೆ ಎಂದಿದೆ. 

ಸಿಂಗಾಪುರದಲ್ಲಿ ಪತ್ತೆಯಾದ ವೈರಸ್‌ನಿಂದ ಭಾರತಕ್ಕೆ ಕೊರೋನಾ 3ನೇ ಅಲೆ; ಎಚ್ಚರಿಕೆ ನೀಡಿದ ಸಿಎಂ!

ಹೌದು ಕೇಜ್ರೀವಾಲ್ ಈ ಮಾತನ್ನು ಖಂಡಿಸಿ ಟ್ವೀಟ್ ಮಾಡಿರುವ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಂಗಾಪುರ ರಾಯಭಾರ ಕಚೇರಿ 'ಸಿಂಗಾಪುರದಲ್ಲಿ ಹೊಸ ಮಾದರಿಯ ಕೊರೋನಾ ತಳಿ ರೂಪಾಂತರಗೊಂಡಿದೆ ಎಂಬ ಮಾತು ಸತ್ಯವಲ್ಲ. 'ಸಿಂಗಾಪುರ ತಳಿ' ಎಂಬ ವೈರಸ್ ಯಾವುದೂ ಇಲ್ಲ. ಫೈಲೋಜೆನೆಟಿಕ್ ಪರೀಕ್ಷೆಯಲ್ಲಿ B.1.617.2 ವೈರಸ್ ಈ ಹಿಂದೆಯೇ ದಾಳಿ ಇಟ್ಟಿರುವ ವೈರಸ್‌ಗಳಲ್ಲೊಂದು, ಭಾರತದಲ್ಲಿ ವರದಿಯಾದ ಹಲವು ಪ್ರಕರಣಗಳಲ್ಲಿ ಇದು ಕಂಡು ಬಂದಿದೆ. ಸಿಂಗಾಪುರದಲ್ಲೂ ಇದು ರೂಪಾಂತರಗೊಂಡು ಇತ್ತೀಚೆಗೆ ಮಕ್ಕಳು ಸೇರಿದಂತೆ ಹಲವರಲ್ಲಿ ಇದೇ ವೈರಸ್ ಕಂಡು ಬಂದಿದೆ' ಎಂದು ಟ್ವೀಟ್ ಮಾಡಿದೆ. 

ಇನ್ನು ಅತ್ತ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್ ಸಿಂಗ್ ಪುರಿ ಕೂಡಾ ಕೇಜ್ರೀವಾಲ್‌ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, 'ಕೇಜ್ರೀವಾಲ್‌ರವರೇ 2020ರ ಮಾರ್ಚ್‌ನಿಂದಲೇ ಅಂತಾರಾಷ್ಟ್ರೀಯ ವಿಮಾನಗಳು ರದ್ದಾಗಿವೆ. ಸಿಂಗಾಪುರದೊಂದಿಗೆ ಏರ್‌ ಬಬಲ್ ಕೂಡಾ ಇಲ್ಲ. ಕೇವಲ ವಂದೇ ಭಾರತ್ ಮಿಷನ್‌ನಡಿ ಕೆಲ ವಿಮಾನಗಳ ಮೂಲಕ ಅಲ್ಲಿ ಸಿಕ್ಕಾಕೊಂಡಿರುವ ಭಾರತೀಯರನ್ನು ಹಿಂದೆ ಕರೆತರಲಾಗುತ್ತಿದೆ. ಇವರು ನಮ್ಮ ದೇಶದ ಜನರೇ. ಹೀಗಿದ್ದರೂ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ಎಲ್ಲಾ ರೀತಿಯ ಎಚ್ಚರಿಕೆ ವಹಿಸಲಾಗುತ್ತಿದೆ' ಎಂದು ಟ್ವೀಟ್ ಮಾಡಿದ್ದಾರೆ.

ಕೇಜ್ರೀವಾಲ್ ಹೇಳಿಕೆಯಿಂದ ವಿದೇಶದಲ್ಲಿರುವ ಭಾರತೀಯರಿಗೆ ಸಂಕಷ್ಟ

ಇನ್ನು ಕೇಜ್ರೀವಾಲ್ ನೀಡಿರುವ ಹೇಳಿಕೆಯಿಂದ ಸಿಂಗಾಪುರದಲ್ಲಿರುವ ಭಾರತೀಯ ಪ್ರಜೆಗಳಿಗೆ ಸಂಕಷ್ಟ ಎದುರಾಗುವುದನ್ನು ತಳ್ಳಿ ಹಾಕುವಂತಿಲ್ಲ. ಸದ್ಯ ಕೊರೋನಾ ವೈರಸ್‌ ಇಡೀ ವಿಶ್ವವನ್ನೇ ಬಾಧಿಸುತ್ತಿದೆ. ಎಲ್ಲಾ ಕಡೆ ಇದು ರೂಪಾಂತರಗೊಂಡು ಮತ್ತಷ್ಟು ಬಲಶಾಲಿಯಾಗಿ ಜನರ ಮೇಲೆ ಆಕ್ರಮಣ ನಡೆಸುತ್ತಿದೆ. ಹೀಗಿರುವಾಗ ಇಂತಹ ವೈರಸ್‌ನ್ನು ವೈಜ್ಞಾನಿಕ ಹೆಸರಿನಿಂದ ಕರೆಯಬೇಕೇ ವಿನಃ, ರೂಪಾಂತರಗೊಂಡ ದೇಶದ ಹೆಸರು ಸೇರಿಸಿ ಕರೆಯುವುದು ಸರಿಯಲ್ಲ. ಇದು ಆ ದೇಶದ ಘನತೆಗೆ ಧಕ್ಕೆಯುಂಟು ಮಾಡುವ ಸಾಧ್ಯತೆಗಳಿವೆ.

"

ಅಲ್ಲದೇ ಇಂತಹ ಹೇಳಿಕೆಯಿಂದ ಆ ದೇಶದಲ್ಲಿರುವ ಭಾರತೀಯ ಪ್ರಜೆಗಳೂ ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿಯೂ ಎದುರಾಗಬಹುದು. ಅಲ್ಲಿನ ಭಾರತೀಯರನ್ನು ವಿಭಿನ್ನವಾಗಿ ನಡೆಸುಕೊಳ್ಳುತ್ತಾರೆಂಬುವುದರಲ್ಲೂ ಅನುಮಾನವಿಲ್ಲ. ಅಲ್ಲದೇ ಸದ್ಯ ಸಿಂಗಾಪುರವೂ ಇದು ಭಾರತದಲ್ಲೇ ಪತ್ತೆಯಾದ ರೂಪಾಂತರಿ ವೈರಸ್‌ ಎಂಬ ಹೇಳಿಕೆ ನೀಡಿದೆ. ಈ ನಿಟ್ಟಿನಲ್ಲಿ ಅಲ್ಲಿರುವ ಭಾರತೀಯರಿಗೆ ಮತ್ತಷ್ಟು ಕಠಿಣ ಕ್ರಮ ಹೇರಲಿದ್ದಾರೆ. 

ಕೇಜ್ರೀವಾಲ್ ಹೇಳಿದ್ದೇನು? 

ಸಿಂಗಾಪುರದಲ್ಲಿ ಪತ್ತೆಯಾದ ಕೊರೋನಾ ವೈರಸ್‌ನ ಪ್ರಭೇದದಿಂದ ಮಕ್ಕಳಿಗೆ ಹೆಚ್ಚು ಅಪಾಯವಿದೆ. ಈ ತಳಿಯು 3ನೇ ಅಲೆಯ ವೈರಸ್‌ ಆಗಿ ದೆಹಲಿ ಪ್ರವೇಶಿಸಬಹುದಾದ ಸಾಧ್ಯತೆಯಿದೆ. ಹೀಗಾಗಿ ಸಿಂಗಾಪುರದ ಎಲ್ಲಾ ವಿಮಾನ ಸೇವೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದರು. ಏತನ್ಮಧ್ಯೆ, ಕೊರೋನಾ ಸೋಂಕಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ 50 ಸಾವಿರ ಪರಿಹಾರ ನೀಡಲಾಗುತ್ತದೆ. ಜೊತೆಗೆ ಆ ವ್ಯಕ್ತಿ ದುಡಿಯುವ ವ್ಯಕ್ತಿಯಾಗಿದ್ದರೆ ಅವರ ಕುಟುಂಬಕ್ಕೆ ಮಾಸಿಕ 2500 ರು. ಪಿಂಚಣಿ ನೀಡಲಾಗುತ್ತದೆ. ತಂದೆ-ತಾಯಿ ಸೇರಿ ಪೋಷಕರ ಅಗಲಿಕೆಯಿಂದ ಅನಾಥರಾದ ಮಕ್ಕಳು 25 ವರ್ಷ ಆಗುವವರಿಗೆ ಮಾಸಿಕ 2500 ರು. ಸಹಾಯ ಧನ ನೀಡುತ್ತೇವೆ ಎಂದು ಕೇಜ್ರಿವಾಲ್‌ ಪ್ರಕಟಿಸಿದ್ದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios