ನಾನು ರೆಬೆಲ್‌ ಅಲ್ಲ, ಲಾಯಲ್‌: ‘ಲೆಟರ್‌ ಬಾಂಬ್‌’ ಸಮರ್ಥಿಸಿಕೊಂಡ ಸಚಿವ ಈಶ್ವರಪ್ಪ!

‘ಲೆಟರ್‌ ಬಾಂಬ್‌’ ಸಮರ್ಥಿಸಿಕೊಂಡ ಸಚಿವ ಈಶ್ವರಪ್ಪ| ರಾಜ್ಯಪಾಲರು, ಬಿಜೆಪಿ ಹೈಕಮಾಂಡ್‌ಗೆ ಬರೆದ ಪತ್ರದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರ ಸುದೀರ್ಘ ವಿವರಣೆ|  ಬಿಎಸ್‌ವೈ ವಿರುದ್ಧ ವೈಯಕ್ತಿಕ ಕಾರಣಕ್ಕೆ ಪತ್ರ ಬರೆದಿಲ್ಲ| ಸಚಿವರು, ಶಾಸಕರು ಕರೆ ಮಾಡಿ ಬೆಂಬಲಿಸಿದ್ದಾರೆ| ನಾನು ಜಗ್ಗೋದಿಲ್ಲ

Not a revolt sought governor advice Karnataka minister KS Eshwarappa pod

ಮೈಸೂರು(ಏ.03): ಇಲಾಖೆ ಅನುದಾನ ಬಿಡುಗಡೆಗೆ ಸಂಬಂಧಿಸಿ ರಾಜ್ಯಪಾಲರಿಗೆ ಪತ್ರ ಬರೆದಿರುವುದನ್ನು ಸಮರ್ಥಿಸಿಕೊಂಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ, ನಾನು ಪಕ್ಷದ ರೆಬೆಲ್‌ ಅಲ್ಲ, ಲಾಯಲ್‌ ಎಂದು ಹೇಳಿದ್ದಾರೆ. ಜತೆಗೆ ಇಲಾಖೆಗೆ ನಿಗದಿಯಾದ ಅನುದಾನವನ್ನು ಕಾನೂನು ಮತ್ತು ನಿಯಮ ಮೀರಿ ವರ್ಗಾಯಿಸದಂತೆ ಕೋರಿದ್ದೇನೆಯೇ ಹೊರತು, ಯಾರ ವಿರುದ್ಧವೂ ಯಾವುದೇ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ಮತ್ತು ಯಡಿಯೂರಪ್ಪ ಅವರ ನಡುವಿನ ವೈಯಕ್ತಿಕ ಕಾರಣಗಳಿಗೆ ಪತ್ರ ಬರೆದಿಲ್ಲ, ನಮ್ಮಿಬ್ಬರ ನಡುವಿನ ಸಂಬಂಧ ಚೆನ್ನಾಗಿಯೇ ಇದ್ದು ಚುನಾವಣೆ ಬಳಿಕ ಸಮಸ್ಯೆ ಬಗೆಹರಿಸುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಪಕ್ಷದೊಳಗೆ ತನ್ನ ವಿರುದ್ಧ ಎದ್ದಿರುವ ಅಸಮಾಧಾನಕ್ಕೂ ತಿರುಗೇಟು ನೀಡಿರುವ ಅವರು ನಾನು ಯಾವುದಕ್ಕೂ ಜಗ್ಗುವುದಿಲ್ಲ ಎಂದು ಖಡಕ್‌ ಆಗಿ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲಾಖೆ ಅನುದಾನಕ್ಕೆ ಸಂಬಂಧಿಸಿ ತಮಗಾಗಿರುವ ಅಸಮಾಧಾನದ ಬಗ್ಗೆ ರಾಜ್ಯಪಾಲರು ಮತ್ತು ಪಕ್ಷದ ವರಿಷ್ಠರಿಗೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ನನ್ನ ಗಮನಕ್ಕೆ ಬಾರದೆ ಒಮ್ಮೆ .774 ಕೋಟಿ, ಮತ್ತೊಮ್ಮೆ .460 ಕೋಟಿ ಮತ್ತು ಈಗ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗೆ .65 ಕೋಟಿ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಆದೇಶಿಸಿದ್ದರು. ಈ ವಿಷಯ ತಿಳಿದು ಬಜೆಟ್‌ನಲ್ಲಿ ಘೋಷಣೆಯಾಗಿ ಇಲಾಖೆಗೆ ಬಂದ ಅನುದಾನವನ್ನು ಸಂಬಂಧಿಸಿದ ಸಚಿವರ ಗಮನಕ್ಕೆ ತರದೆ, ಕ್ರಿಯಾಯೋಜನೆ ರೂಪಿಸದೆ ಬಿಡುಗಡೆಗೊಳಿಸಲು ಅವಕಾಶ ಇದೆಯಾ ಎಂದು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕೇಳಿದೆ. ಆಗ ಅವರು ತಮ್ಮಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡರು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ನೇರವಾಗಿ ಈ ಕುರಿತು ಪತ್ರ ಬರೆದೆ. ಅವರಿಂದ ಉತ್ತರ ಬರದಿದ್ದಾಗ ಪಕ್ಷದ ಉಸ್ತುವಾರಿ ಅರುಣ್‌ ಸಿಂಗ್‌, ಪ್ರಧಾನಿ ಮೋದಿ, ಅಮಿತ್‌ ಶಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಗಮನಕ್ಕೂ ತಂದೆ. ಆದರೂ ಮುಖ್ಯಮಂತ್ರಿಗಳು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಕರೆ ಮಾಡಿ ಹಣ ಬಿಡುಗಡೆಗೊಳಿಸಿದ ಬಳಿಕ ಸಂಬಂಧಿಸಿದ ಸಚಿವರ ಗಮನಕ್ಕೆ ತರುವಂತೆ ಪತ್ರ ಬರೆದಿದ್ದರು. ಇದರ ಆಧಾರದ ಮೇಲೆ ಪ್ರಧಾನ ಕಾರ್ಯದರ್ಶಿಗಳು ಹಣ ಕೂಡ ಬಿಡುಗಡೆಗೊಳಿಸಲು ಆದೇಶಿಸಿದರು. ಈಗ ಅದಕ್ಕೆ ನಾನು ತಡೆ ನೀಡಿದ್ದೇನೆ ಎಂದು ವಿವರಿಸಿದರು.

ಸಚಿವರು ಪೋಸ್ಟ್‌ ಮನ್‌ಗಳಲ್ಲ:

ಇದೇವೇಳೆ ಪ್ರತಿ ಇಲಾಖೆಗೆ ಸಚಿವರು ಇರುವುದು ಪೋಸ್ಟ್‌ಮನ್‌ ಕೆಲಸ ಮಾಡಲು ಅಲ್ಲ ಎಂದು ಗುಡುಗಿದ ಅವರು ಅವರಿಗೂ ಜವಾಬ್ದಾರಿ ಇರುತ್ತದೆ. ನೀವು ಹೇಳಿದವರಿಗೆ, ನೀವು ಹೇಳಿದಷ್ಟೇ ಅನುದಾನವನ್ನು ಬಿಡುಗಡೆ ಮಾಡುತ್ತೇನೆ. ಅದನ್ನು ನನ್ನ ಗಮನಕ್ಕೆ ತನ್ನಿ, ನಿಯಮಾನುಸಾರ ಬಿಡುಗಡೆ ಮಾಡಲು ಕ್ರಮ ವಹಿಸುತ್ತೇನೆ. ನಮ್ಮ ಇಲಾಖೆಗೆ ಬಂದ ಅನುದಾನ ನಮಗೆ ಗೊತ್ತಿಲ್ಲದೆ ಬಿಡುಗಡೆ ಆಗುವುದು ನಿಯಮಕ್ಕೆ ವಿರುದ್ಧ. ಈ ಪದ್ಧತಿ ಮುಂದುವರೆಯಬಾರದು ಎಂಬ ಕಾರಣಕ್ಕೆ ನಾನು ಈ ತೀರ್ಮಾನಕ್ಕೆ ಬಂದೆ ಎಂದು ತಿಳಿಸಿದರು.

ಅನೇಕರು ಕರೆ ಮಾಡಿದ್ದರು:

ಯಡಿಯೂರಪ್ಪ ಅವರ ಪರವಾಗಿ ಸುದ್ದಿಗೋಷ್ಠಿ ನಡೆಸಿದ ಕೆಲವು ಸಚಿವರು ಮತ್ತು ಶಾಸಕರು, ಸುದ್ದಿಗೋಷ್ಠಿಯ ಬಳಿಕ ನನಗೆ ಕರೆ ಮಾಡಿ ನೀವು ಕೈಗೊಂಡ ತೀರ್ಮಾನ ಸರಿ ಇದೆ. ನಾವು ನಿಮ್ಮ ಪರವಾಗಿದ್ದೇವೆ ಎಂದಿದ್ದಾರೆ. ಅಂತೆಯೇ ಅನೇಕಾರು ಮಂದಿ ಸಂಸದರು, ಶಾಸಕರು ಕರೆ ಮಾಡಿದ್ದರು. ನನ್ನ ಖಾತೆ ಬದಲಾವಣೆ ಅಥವಾ ನಾನು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳುವ ಅಧಿಕಾರ ನನ್ನ ಪಕ್ಷಕ್ಕಿದೆ. ನಾನು ಯಾವುದಕ್ಕೂ ಜಗ್ಗುವುದಿಲ್ಲ ಎಂದು ಹೇಳಿದರು.

Latest Videos
Follow Us:
Download App:
  • android
  • ios