ಕೊರೋನಾ ಹೋರಾಟ: ಭಾರತಕ್ಕೆ ನಾರ್ವೆಯಿಂದ 17 ಕೋಟಿ ನೆರವು..!
ಭಾರತಕ್ಕೆ ನಾರ್ವೆ ನೆರವು | 2.4 ಮಿಲಿಯನ್ ಡಾಲರ್ ಘೋಷಿಸಿದ ನಾರ್ವೆ
ದೆಹಲಿ(ಏ.29): ಭಾರತದಲ್ಲಿ ಕೊರೋನವೈರಸ್ ಪೀಡಿತ ಜನರಿಗೆ ವೈದ್ಯಕೀಯ ಸೇವೆಗಳನ್ನು ಬೆಂಬಲಿಸಲು 2.4 ಮಿಲಿಯನ್ ಡಾಲರ್ ಅಂದರೆ ಸುಮಾರು 17 ಕೋಟಿ ನೆರವು ನೀಡುವುದಾಗಿ ನಾರ್ವೆ ತಿಳಿಸಿದೆ. ನೆರವು ಘೋಷಿಸಿದ ನಾರ್ವೇ ಸರ್ಕಾರ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ನಾರ್ವೆ ಭಾರತದೊಂದಿಗೆ ನಿಂತಿದೆ ಎಂದು ಹೇಳಿದ್ದಾರೆ.
ನಾರ್ವೇಜಿಯನ್ ಸರ್ಕಾರವು ಭಾರತದಲ್ಲಿ ಕೋವಿಡ್ ಪರಿಹಾರಕ್ಕಾಗಿ 2.4 ಮಿಲಿಯನ್ ಡಾಲರ್ ಕೊಡುಗೆಯನ್ನು ಘೋಷಿಸಿದೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳ ಮೂಲಕ ಕಳುಹಿಸಲಾಗುತ್ತದೆ ಎಂದು ನಾರ್ವೇಜಿಯನ್ ರಾಯಭಾರ ಕಚೇರಿ ತಿಳಿಸಿದೆ.
16 ವರ್ಷದಲ್ಲೇ ಮೊದಲ ಬಾರಿ ವಿದೇಶಿ ನೆರವು ಸ್ವೀಕರಿಸಿದ ಭಾರತ: ಲಿಸ್ಟ್‌ನಲ್ಲಿ ಚೀನವೂ ಇದೆ
ಆಂಬ್ಯುಲೆನ್ಸ್ ಸೇವೆಗಳು, ರಕ್ತದಾನ ಸೇವೆಗಳು ಮತ್ತು ವೈದ್ಯಕೀಯ ಸಹಾಯವಾಣಿಗಳನ್ನು ಹೆಚ್ಚಿಸಲು, ಆಂಬ್ಯುಲೆನ್ಸ್‌ಗಳಿಗಾಗಿ ಆಮ್ಲಜನಕ ಟ್ಯಾಂಕ್‌ಗಳಂತಹ ಉಪಕರಣಗಳನ್ನು ಖರೀದಿಸಲು ಮತ್ತು ವಲಸೆ ಕಾರ್ಮಿಕರು ಮತ್ತು ಇತರ ದುರ್ಬಲ ಸಮುದಾಯಕ್ಕೆ ನೈರ್ಮಲ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ವಿತರಿಸಲು ಈ ಮೊತ್ತ ಉಪಯೋಗವಾಗಲಿದೆ ಎಂದು ಹೇಳಲಾಗಿದೆ.
ಭಾರತವು ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯೊಂದಿಗೆ ಹೋರಾಡುತ್ತಿರುವಾಗ, ಪ್ರಪಂಚದಾದ್ಯಂತದ ದೇಶಗಳು ಪರಿಸ್ಥಿತಿಯನ್ನು ಎದುರಿಸಲು ನೆರವು ನೀಡಲು ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸುವುದಾಗಿ ಘೋಷಿಸಿವೆ.
ಭಾರತಕ್ಕೆ ನೆರವು ಘೋಷಿಸಿರುವ ಪ್ರಮುಖ ದೇಶಗಳಲ್ಲಿ ಅಮೆರಿಕ, ರಷ್ಯಾ, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ಐರ್ಲೆಂಡ್, ಬೆಲ್ಜಿಯಂ, ರೊಮೇನಿಯಾ, ಲಕ್ಸೆಂಬರ್ಗ್, ಸಿಂಗಾಪುರ್, ಪೋರ್ಚುಗಲ್, ಸ್ವೀಡನ್, ನ್ಯೂಜಿಲೆಂಡ್, ಕುವೈತ್ ಮತ್ತು ಮಾರಿಷಸ್ ಸೇರಿವೆ.