ತಿರುಪತಿ[ಮಾ.16]: ಕೊರೋನಾ ವೈರಸ್‌ ಭೀತಿ ಲಕ್ಷಾಂತರ ಜನರು ಸೇರುವ ತಿರುಮಲ ವೆಂಕಟೇಶ್ವರನ ಸನ್ನಿಧಿಗೂ ತಟ್ಟಿದೆ. ಕೊರೋನಾ ಹಿನ್ನೆಲೆಯಲ್ಲಿ ಕೆಲವು ನಿತ್ಯ ಪೂಜಾ ಸೇವೆಗಳು ಹಾಗೂ ಸಾಪ್ತಾಹಿಕ ಪೂಜಾ ಸೇವೆಗಳನ್ನು ಕೈಬಿಡಲು ತಿರುಪತಿ-ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ) ನಿರ್ಧರಿಸಿದೆ.

ಕ್ರಿ.ಶ. 300ನೇ ಇಸವಿಯಲ್ಲಿ ನಿರ್ಮಾಣವಾಗಿದೆ ಎಂದು ನಂಬಲಾದ ಹಾಗೂ ಶತಮಾನಗಳ ಇತಿಹಾಸವುಳ್ಳ ದೇವಸ್ಥಾನದಲ್ಲಿ ಇಂಥ ಕ್ರಮ ಜರುಗಿಸುತ್ತಿರುವುದು ಇದೇ ಮೊದಲು.

ಸುದ್ದಿಗಾರರ ಜತೆ ಮಾತನಾಡಿದ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್‌ ಕುಮಾರ್‌ ಸಿಂಘಲ್‌, ‘ಪ್ರತಿ ಬುಧವಾರ ನಡೆಯುವ ಸಹಸ್ರ ಕಲಶಾಭಿಷೇಕ, ಸೋಮವಾರದ ವಿಶೇಷ ಪೂಜೆ ಹಾಗೂ ನಿತ್ಯದ ವಸಂತೋತ್ಸವವನ್ನು ಅನಿರ್ದಿಷ್ಟಅವಧಿಗೆ ರದ್ದುಗೊಳಿಸಲಾಗಿದೆ. ದೇವರ ಉತ್ಸವ ಎಂದಿನಂತೆ ನಡೆಯಲಿದೆ. ಶ್ರೀ ರಾಮ ನವಮಿ ಕೂಡ ಯಾವುದೇ ನಿರ್ಬಂಧವಿಲ್ಲದೇ ನಡೆಯಲಿದೆ’ ಎಂದರು.

ಕ್ಯೂ ಬದಲು ಟೋಕನ್‌:

ಆಯಕಟ್ಟಿನ ಸ್ಥಳಗಳಲ್ಲಿ ಭಕ್ತರು ಗುಂಪುಗೂಡಲು ಬಿಡವುದಿಲ್ಲ. ಈ ಮುಂಚಿನ 5000-5500 ಭಕ್ತರ ಬದಲು ತಾಸಿಗೆ 3500ರಿಂದ 4000 ಭಕ್ತರನ್ನು ಮಾತ್ರ ದರ್ಶನಕ್ಕೆ ಬಿಡಲಾಗುವುದು ಎಂದು ತಿಳಿಸಲಾಗಿದೆ.

ಮಾ.17ರಿಂದ ಭಕ್ತರನ್ನು ಸರದಿಯಲ್ಲಿ ನಿಲ್ಲಿಸುವ ಬದಲು ದರ್ಶನದ ಸಮಯ ಬರೆದು ಟೋಕನ್‌ ನೀಡಲಾಗುವುದು. ಹೀಗಾಗಿ ಭಕ್ತರು ಗುಂಪು ಸೇರಿ ಕಂಪಾರ್ಟ್‌ಮೆಂಟ್‌ಗಳಲ್ಲಿ ಕೂಡುವುದು ತಪ್ಪಲಿದೆ. ಟೋಕನ್‌ ಪಡೆದ ಭಕ್ತರು ಸಮಯಕ್ಕೆ ಸರಿಯಾಗಿ ಬಂದರೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಟಿಟಿಡಿ ಹೇಳಿದೆ.

ವಿಶೇಷ ಕೌಂಟರ್‌ ತೆರೆಯಲಾಗುವುದು. ಅಲ್ಲಿ ಟೋಕನ್‌ ಪಡೆಯಲು ಭಕ್ತರು ಆಧಾರ್‌ ಅಥವಾ ವೋಟರ್‌ ಐಡಿ ಅಥವಾ ಡಿಎಲ್‌ ತರಬೇಕು ಎಂದು ಅದು ತಿಳಿಸಿದೆ.