Asianet Suvarna News Asianet Suvarna News

ಪೆಗಾಸಸ್‌ ಗೂಢಚರ್ಯೆ: ಎನ್‌ಎಸ್‌ಒ ಗ್ರೂಪ್‌ ಜೊತೆ ವ್ಯವಹಾರ ನಡೆಸಿಲ್ಲ, ಕೇಂದ್ರ!

* ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಜೊತೆ ವ್ಯವಹಾರ ನಡೆಸಿಲ್ಲ

* ಪೆಗಾಸಸ್‌ ಗೂಢಚರ್ಯೆ: ಕೇಂದ್ರ ನಕಾರ

* ಸಂಸತ್ತಿಗೆ ರಕ್ಷಣಾ ಸಚಿವಾಲಯ ಲಿಖಿತ ಉತ್ತರ

* ಕಣ್ಗಾವಲು ಆರೋಪದ ಕುರಿತು ಸ್ಪಷ್ಟನೆ

No transaction with NSO group: Defence ministry response in Parliament amid Pegasus row pod
Author
Bangalore, First Published Aug 10, 2021, 7:51 AM IST

ನವದೆಹಲಿ(ಆ.10): ‘ಪೆಗಾಸಸ್‌ ಗೂಢಚರ್ಯೆ ಸಾಫ್ಟ್‌ವೇರ್‌’ ಅಭಿವೃದ್ಧಿಪಡಿಸಿರುವ ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಜೊತೆ ತಾನು ಯಾವುದೇ ವ್ಯವಹಾರ ನಡೆಸಿಲ್ಲ ಎಂದು ರಕ್ಷಣಾ ಸಚಿವಾಲಯ ರಾಜ್ಯಸಭೆಗೆ ಸ್ಪಷ್ಟಪಡಿಸಿದೆ. ಈ ಮೂಲಕ ವಿಪಕ್ಷ ನಾಯಕರು, ಪತ್ರಕರ್ತರು ಸೇರಿದಂತೆ ನೂರಾರು ಜನರ ಮೇಲೆ ‘ಪೆಗಾಸಸ್‌ ಸಾಫ್ಟ್‌ವೇರ್‌’ ಬಳಸಿ ಕೇಂದ್ರ ಸರ್ಕಾರ ಬೇಹುಗಾರಿಕೆ ನಡೆಸಿದೆ ಎಂಬ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.

‘ಎನ್‌ಎಸ್‌ಒ ಗ್ರೂಪ್‌ ಜೊತೆ ಕೇಂದ್ರ ಸರ್ಕಾರ ವ್ಯವಹಾರ ನಡೆಸಿದೆಯೇ’ ಎಂಬ ರಾಜ್ಯಸಭಾ ಸದಸ್ಯರ ಪ್ರಶ್ನೆಗೆ ಉತ್ತರಿಸಿರುವ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್‌ ಭಟ್‌, ‘ರಕ್ಷಣಾ ಸಚಿವಾಲಯವು ಎನ್‌ಎಸ್‌ಒ ಗ್ರೂಪ್‌ ಟೆಕ್ನಾಲಜೀಸ್‌ ಜೊತೆಗೆ ಯಾವುದೇ ವ್ಯವಹಾರ ನಡೆಸಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಪೆಗಾಸಸ್‌ ಬೇಹುಗಾರಿಕೆ ವಿಷಯವನ್ನು ಮುಂದಿಟ್ಟುಕೊಂಡಿರುವ ವಿಪಕ್ಷಗಳು ಜು.19ರಿಂದ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಆರಂಭದ ದಿನದಿಂದಲೂ ಅಡ್ಡಿ ಮಾಡುತ್ತಲೇ ಬಂದಿವೆ. ಹೀಗಾಗಿ ಸತತ ಮೂರು ವಾರಗಳಿಂದಲೂ ಸಂಸತ್ತಿನ ಉಭಯ ಸದನಗಳಲ್ಲೂ ಯಾವುದೇ ಮಹತ್ವದ ವಿಷಯಗಳ ಕುರಿತು ಚರ್ಚೆ ಸಾಧ್ಯವಾಗಿಲ್ಲ.

ಇದೇ ವಿಷಯದ ಕುರಿತು ಕಳೆದ ವಾರ ಲೋಕಸಭೆಯಲ್ಲಿ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದ ಐಟಿ ಖಾತೆ ಸಚಿವ ಅಶ್ವಿನಿ ವೈಷ್ಣವ್‌, ‘ಇಂಥ ಆರೋಪಗಳು ಕೇವಲ ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕ ಹಚ್ಚುವ ಯತ್ನ. ದೇಶದಲ್ಲಿ ಯಾವುದೇ ಬೇಹುಗಾರಿಕೆ ನಡೆಸಲು ಹಲವು ಶಿಷ್ಟಾಚಾರಗಳು ಚಾಲ್ತಿಯಲ್ಲಿವೆ. ಇವು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಅನಧಿಕೃತವಾಗಿ ಬೇಹುಗಾರಿಕೆ ನಡೆಸದಂತೆ ನೋಡಿಕೊಳ್ಳುತ್ತವೆ’ ಎಂದು ಉತ್ತರಿಸಿದ್ದರು. ಆದರೆ ಪೆಗಾಸಸ್‌ ಜತೆಗೆ ಭಾರತ ಸರ್ಕಾರ ವ್ಯವಹಾರ ನಡೆಸಿದೆಯೇ ಎಂಬ ಬಗ್ಗೆ ಸ್ಪಷ್ಟಉತ್ತರ ನೀಡಿರಲಿಲ್ಲ.

ಆದ್ದರಿಂದ ವಿಪಕ್ಷಗಳು ಈ ಕುರಿತು ಜಂಟಿ ಸಂಸದೀಯ ತನಿಖೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗÜೃಹ ಸಚಿವ ಅಮಿತ್‌ ಶಾ ಹೇಳಿಕೆಗೆ ಒತ್ತಾಯಿಸಿ ಕಲಾಪಕ್ಕೆ ಅಡ್ಡಿ ಮಾಡುತ್ತಲೇ ಇವೆ/

ಏನಿದು ಎನ್‌ಎಸ್‌ಒ?:

‘ಎನ್‌ಎಸ್‌ಒ’ ಎನ್ನುವುದು ಇಸ್ರೇಲ್‌ ಮೂಲದ ಒಂದು ಕಂಪನಿ. ಅದು ಪೆಗಾಸಸ್‌ ಎಂಬ ಬೇಹುಗಾರಿಕಾ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದೆ. ಇದನ್ನು ಯಾವುದೇ ವ್ಯಕ್ತಿಗೆ ಅರಿವಿಲ್ಲದಂತೆ ಆತನ ಮೊಬೈಲ್‌ಗೆ ಸೇರಿಸಿ, ಅವರ ಎಲ್ಲಾ ಮಾಹಿತಿಗಳನ್ನು ಕದಿಯಬಹುದಾಗಿದೆ. ಈ ಸಾಫ್ಟ್‌ವೇರ್‌ ಅನ್ನು ಅದು ಸರ್ಕಾರ, ತನಿಖಾ ಸಂಸ್ಥೆಗಳಿಗೆ ಮಾತ್ರವೇ ನೀಡುತ್ತದೆ. ಭಾರತದಲ್ಲೂ ಬೇಹುಗಾರಿಕೆ ನಡೆದಿದೆ ಎಂದು ಕೆಲವು ಮಾಧ್ಯಮಗಳು ದಾಖಲೆ ಸಮೇತ ವರದಿ ಪ್ರಕಟಿಸಿದ ಕಾರಣ, ಸರ್ಕಾರವೇ ಅದನ್ನು ನಡೆಸಿದೆ ಎಂಬುದು ವಿಪಕ್ಷಗಳ ಆರೋಪ.

Follow Us:
Download App:
  • android
  • ios