'ಲತಾಜೀ ಪಾರ್ಥಿವ ಶರೀರಕ್ಕೆ ಶಾರುಖ್ ಖಾನ್ ಉಗಿದ ಆರೋಪ ಸುಳ್ಳು,ಅವರು ಗಾಳಿ ಊದಿದ್ದರು'
* ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನ
* ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಲತಾಜೀಗೆ ಅಂತಿಮ ನಮನ
* ಲತಾ ಮಂಗೇಶ್ಕರ್ ಪಾರ್ಥೀವ ಶರೀರಕ್ಕೆ ಶಾರುಖ್ ಉಗಿದಿರುವ ಆರೋಪ
ಮುಂಬೈ(ಫೆ.07): ಪ್ರಧಾನಿ ನರೇಂದ್ರ ಮೋದಿ, ಶಾರುಖ್ ಖಾನ್, ಆಮಿರ್ ಖಾನ್, ರಣಬೀರ್ ಕಪೂರ್, ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವರು ಲತಾ ಮಂಗೇಶ್ಕರ್ಗೆ ಅಂತಿಮ ನಮನ ಸಲ್ಲಿಸಿದರು. ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಭಾನುವಾರ (ಫೆ.6) ಸಂಜೆ ಅಂತ್ಯಕ್ರಿಯೆ ನೆರವೇರಿತು. ಈ ಸಂದರ್ಭದಲ್ಲಿ ನಟ ಶಾರುಖ್ ಖಾನ್ ನಡೆದುಕೊಂಡ ರೀತಿ ಕೆಲವರಿಗೆ ಅಚ್ಚರಿ ಮೂಡಿಸಿದೆ. ಮ್ಯಾನೇಜರ್ ಪೂಜಾ ದದ್ಲಾನಿ ಜೊತೆ ಬಂದ ಅವರು ಲತಾಜೀ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದರು. ಅದರ ವಿಡಿಯೋ ಕೂಡ ವೈರಲ್ ಆಗಿದೆ.
"
ಅಂತಿಮ ನಮನ ಸಲ್ಲಿಸುವ ವೇಳೆ ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರದ ಮೇಲೆ ಶಾರುಖ್ ಉಗಿದರು ಎಂಬ ಆರೋಪವನ್ನು ಕೆಲವರು ಹೊರಿಸಿದ್ದಾರೆ. ಈ ಕುರಿತಂತೆ ಚರ್ಚೆ ಶುರುವಾಗಿದೆ. ಲತಾ ಮಂಗೇಶ್ಕರ್ ಅವರ ಮೃತದೇಹದ ಎದುರಿನಲ್ಲಿ ನಿಂತು ಪ್ರಾರ್ಥನೆ ಮಾಡುವಾಗ ಶಾರುಖ್ ಖಾನ್ ಅವರು ಮಾಸ್ಕ್ ಧರಿಸಿದ್ದರು. ಲೆಜೆಂಡರಿ ಗಾಯಕಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದುವಾ ಮಾಡಿದರು. ಬಳಿಕ ಮಾಸ್ಕ್ ತೆಗೆದು ಪಾರ್ಥಿವ ಶರೀರದ ಕಡೆಗೆ ಗಾಳಿ ಊದಿದರು. ಮುಸ್ಲಿಂ ಸಮುದಾಯದಲ್ಲಿ ಈ ರೀತಿ ಮಾಡುವ ಪದ್ಧತಿ ಇದೆ. ಆದರೆ ಅವರು ಗಾಳಿ ಊದಿದ್ದನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಲತಾಜೀ ಪಾರ್ಥಿವ ಶರೀರಕ್ಕೆ ಶಾರುಖ್ ಖಾನ್ ಉಗಿದರು ಎಂದು ಕೆಲವರು ಆರೋಪಿಸಿದ್ದಾರೆ.
ಬಿಜೆಪಿ ಮುಖಂಡನ ಟ್ವೀಟ್ನಿಂದ ವಿವಾದ
ಹರಿಯಾಣದ ಬಿಜೆಪಿ ಮುಖಂಡ ಅರುಣ್ ಯಾದವ್ ಮಾಡಿದ ಒಂದು ಟ್ವೀಟ್ನಿಂದಾಗಿ ವಿವಾದ ಹುಟ್ಟಿಕೊಂಡಿದೆ. ವಿಡಯೋ ಶೇರ್ ಮಾಡಿ ‘ಅವರು ಉಗಿದ್ರಾ’ ಎಂದು ಆ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ. ಇದನ್ನು ನೋಡಿದ ಅನೇಕರು ಶಾರುಖ್ ಖಾನ್ ವಿರುದ್ಧ ಹರಿಹಾಯ್ದಿದ್ದಾರೆ. ದೊಡ್ಡ ನಟನಾಗಿ ಹೀಗಾ ನಡೆದುಕೊಳ್ಳುವುದು ಎಂದು ಪ್ರಶ್ನಿಸಿದ್ದಾರೆ. ದುರ್ವತನೆ ತೋರುವುದನ್ನು ಬಿಡಿ ಎಂದು ಕಿಡಿಕಾರಿದ್ದಾರೆ. ಇನ್ನೂ ಕೆಲವರು ಅದು ದುವಾ ಪ್ರಾರ್ಥನೆ ತಪ್ಪಾಗಿ ಅರ್ಥೈಸಿಕೊಂಡು ವಿವಾದ ಸೃಷ್ಟಿಸಬೇಡಿ ಎಂದು ಕಮೆಂಟ್ ಮಾಡಿದ್ದಾರೆ.
ಇಸ್ಲಾಂ ಸಂಪ್ರದಾಯವನ್ನು ವಿವರಿಸಿದ ಮೌಲಾನಾ ಸುಫಿಯಾನ್ ನಿಜಾಮಿ
ಸದ್ಯ ಈ ಕುರಿತಾಗಿ ದಾರುಲ್ ಉಲೂಮ್ ಫರಂಗಿ ಮಹಲ್ ವಕ್ತಾರ ಮೌಲಾನಾ ಸುಫಿಯಾನ್ ನಿಜಾಮಿ ಕೂಡಾ ಕೆಲ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನು? ಶಾರುಖ್ ಲತಾಜೀ ಪಾರ್ತೀವ ಶರೀರಕ್ಕೆ ಉಗಿದಿದ್ದಾರೆಂದು ಕೇಳಿ ಬರುತ್ತಿರುವ ಆರೋಪ ಸುಳ್ಳು ಹಾಗೂ ಆಧಾರರಹಿತ. ತಮ್ಮ ಸ್ವಾರ್ಥಕ್ಕಾಗಿ ದೇಶದಲ್ಲಿ ಪ್ರತಿಯೊಂದು ವಿಚಾರದಲ್ಲಿ ತಪ್ಪು ಹುಡುಕಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡುವವರು ಇಂತಹ ಆರೋಪ ಹಬ್ಬಿಸಿದ್ದಾರೆ.
"
ಇಸ್ಲಾಂ ಧರ್ಮದ ಅನ್ವಯ ವ್ಯಕ್ತಿಯೊಬ್ಬ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಮೃತಪಟ್ಟರೆ ಧರ್ಮದನ್ವಯ ದುವಾ(ಪ್ರಾರ್ಥನೆ) ಸಲ್ಲಿಸಲಾಗುತ್ತದೆ. ಬಳಿಕ ಅವರ ಮೇಲೆ ಗಾಳಿಯನ್ನು ಊದಲಾಗುತ್ತದೆ. ಈ ಪ್ರಾರ್ಥನೆಯ ಪ್ರತಿಫಲ ಆ ವ್ಯಕ್ತಿಗೆ ಮುಟ್ಟಲಿ ಎಂಬ ಉದ್ದೇಶದಿಂಣದ ಹೀಗೆ ಮಾಡಲಾಗುತ್ತದೆ. ಆದರೆ ಇಸ್ಲಾಂ ಧರ್ಮದ ಈ ಸಂಪ್ರದಾಯವನ್ನು ಅರಿಯದ ಹಾಗೂ ಈ ಸಮುದಾಯದ ವಿರುದ್ಧ ವಿಷಕಾರುವ ಮನಸ್ಥಿತಿಯುಳ್ಳವರು ಇಂತಹ ವಿಡಿಯೋಈ ಹಾಗೂ ಆರೋಪಗಳನ್ನು ವೈರಲ್ ಮಾಡುತ್ತಾರೆ ಎಂದಿದ್ದಾರೆ.
ಆದರೆ ಈ ದೇಶದಲ್ಲಿ ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಸ್ವಾರ್ಥ ಹಾಗೂ ರಾಜಕೀಯವನ್ನು ದೂರವಿಟ್ಟು ಮೃತಪಟ್ಟವರಿಗೆ ನಮನ ಸಲ್ಲಿಸಿದರೆ ಉತ್ತಮ ಎಂದೂ ಅವರು ತಿಳಿಸಿದ್ದಾರೆ.