ನವದೆಹಲಿ(ನ.16): ದೀಪಾವಳಿಯ ಸಂದರ್ಭದಲ್ಲಿ ಜನರು ಪರಿಸರ ಕಾಳಜಿಯನ್ನು ಮರೆತು ಪಟಾಕಿಯನ್ನು ಸಿಡಿಸಿದ್ದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ ವಾಯು ಗುಣಮಟ್ಟಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದ್ದು, ರಾಜಧಾನಿ ಗ್ಯಾಸ್‌ ಚೇಂಬರ್‌ ಆಗಿ ಮಾರ್ಪಟ್ಟಿದೆ. ದೆಹಲಿಯ ಹಲವು ಭಾಗಗಳಲ್ಲಿ ಮುಂಜಾನೆಯ ವೇಳೆ ಹೊಗೆಯ ದಪ್ಪ ಪದರ ಆವರಿಸಿಕೊಳ್ಳುತ್ತಿದ್ದು, ಮನೆಯಿಂದ ಹೊರಗೆ ಬಂದರೆ ಪಟಾಕಿಯ ಹೊಗೆಯ ಕಟು ವಾಸನೆ ಮೂಗಿಗೆ ತಾಕುತ್ತಿದೆ.

ದೆಹಲಿಯಲ್ಲಿ ಭಾನುವಾರ ಮುಂಜಾನೆ 8 ಗಂಟೆಗೆ ವಾಯು ಗುಣಮಟ್ಟಸೂಚ್ಯಂಕ (ಎಕ್ಯೂಐ) 468 ಅಂಕ ದಾಖಲಾಗಿದೆ. ಐಟಿಒ ಹಾಗೂ ಆನಂದ್‌ ವಿಹಾರ್‌ ಪ್ರದೇಶ ಸೇರಿದಂತೆ ದೆಹಲಿಯ ಬಹುತೇಕ ಕಡೆಗಳಲ್ಲಿ ಎಕ್ಯೂಐ 450ಕ್ಕಿಂತಲೂ ಅಧಿಕ ದಾಖಲಾಗಿದೆ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ತಿಳಿಸಿದೆ.

ಗಾಳಿಯಲ್ಲಿ ಪಿಎಂ 2.5 ಸೂಕ್ಷ್ಮ ಕಣಗಳ ಪ್ರಮಾಣ 300 ಮೈಕ್ರೋಗ್ರಾಮ್‌ಗಿಂತ ಜಾಸ್ತಿ ಇದ್ದರೆ ಅದನ್ನು ಅಪಾಯಕಾರಿ ಮಟ್ಟಎಂದು ಪರಿಗಣಿಸಲಾಗುತ್ತದೆ. ಆದರೆ, ದೆಹಲಿಯಲ್ಲಿ ವಾಯು ಮಾಲಿನ್ಯ ಅಪಾಯಕಾರಿ ಮಟ್ಟವನ್ನೂ ಮೀರಿದ್ದು, ಪಿಎಂ 2.5 ಸೂಕ್ಷ್ಮ ಕಣಗಳ ಪ್ರಮಾಣ ಪ್ರತಿ ಕ್ಯೂಬಿಕ್‌ ಮೀಟರ್‌ಗೆ 400 ಮೈಕ್ರೋಗ್ರಾಮ್‌ನಷ್ಟುದಾಖಲಾಗಿದೆ. ಇಂತಹ ಗಾಳಿಯನ್ನು ಉಸಿರಾಡುವುದರಿಂದ ಹೃದಯ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳ ಉಲ್ಬಣಗೊಳ್ಳಲಿದ್ದು, ಹೆಚ್ಚಿನ ಸಾವು-ನೋವಿಗೆ ಕಾರಣವಾಗಲಿದೆ ಎಂದು ವೈದ್ಯರು ಹಾಗೂ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಮಧ್ಯೆ ದೆಹಲಿಯಲ್ಲಿ ಪಾಶ್ಚಾತ್ಯ ಹವಾಮಾನ ವೈಪರೀತ್ಯದಿಂದಾಗಿ ಭಾನುವಾರ ಸಂಜೆ ಮಳೆಯಾಗಿದೆ. ಇದರಿಂದ ವಾಯು ಮಾಲಿನ್ಯ ಇಳಿಕೆ ಕಾಣುವ ನಿರೀಕ್ಷೆ ಇದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನಾ ಸಾವು ಹೆಚ್ಚಳ:

ದೆಹಲಿಯಲ್ಲಿ ವಾಯು ಮಾಲಿನ್ಯದಿಂದಾಗಿ ಕೊರೋನಾ ವೈರಸ್‌ ಪ್ರರಣಗಳು ಹೆಚ್ಚುತ್ತಿದ್ದು, ಸೋಂಕು ಧೃಢಪಡುವ ಪ್ರಮಾಣ ಶೇ.15.33ಕ್ಕೆ ಏರಿಕೆ ಆಗಿದೆ. ಇದು ದೇಶದಲ್ಲೇ ಅಧಿಕ. ಇದೇ ವೇಳೆ ಭಾನುವಾರ ಕೊರೋನಾದಿಂದ ಮತ್ತೆ 95 ಮಂದಿ ಸಾವಿಗೀಡಾಗಿದ್ದಾರೆ. ಕಳೆದ 17 ದಿನಗಳ ಅಂತರದಲ್ಲಿ 1,258 ಮಂದಿ ಕೊರೋನಾಕ್ಕೆ ಬಲಿ ಆಗಿದ್ದಾರೆ.