ನವದೆಹಲಿ(ಫೆ.03): ದೇಶವ್ಯಾಪಿಯಾಗಿ ಅಂತರ್‌ಧರ್ಮೀಯ ವಿವಾಹ ನಿಷೇಧ (ಲವ್‌ ಜಿಹಾದ್‌ ನಿಷೇಧ) ಕಾಯ್ದೆ ಜಾರಿಗೊಳಿಸುವ ಉದ್ದೇಶವಿಲ್ಲ. ಇದು ರಾಜ್ಯ ಸರ್ಕಾರಗಳಿಗೆ ಬಿಟ್ಟವಿಷಯ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಕೇಂದ್ರ ಗೃಹ ಸಚಿವಾಲಯ, ‘ಅಂತರ್‌ ಧರ್ಮೀಯ ವಿವಾಹ ನಿಷೇಧಿಸಲು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಉದ್ದೇಶವಿಲ್ಲ. ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಅಪರಾಧಗಳನ್ನು ಪತ್ತೆ ಮಾಡುವುದು ಹಾಗೂ ತನಿಖೆ ನಡೆಸುವುದು ರಾಜ್ಯಗಳಿಗೆ ಸಂಬಂಧಿಸಿದ ವಿಷಯ’ ಎಂದಿದೆ.

ಇತ್ತೀಚೆಗೆ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದ ಬಿಜೆಪಿ ಆಡಳಿತದ ರಾಜ್ಯಗಳು ಲವ್‌ ಜಿಹಾದ್‌ ನಿಷೇಧ ಕಾಯ್ದೆ ಜಾರಿಗೆ ತಂದಿವೆ. ಕರ್ನಾಟಕದಲ್ಲೂ ಇದರ ಜಾರಿ ಕುರಿತ ಚರ್ಚೆ ನಡೆದಿದ್ದವು.