ನವದೆಹಲಿ[ಮಾ.07]: ಭ್ರಷ್ಟ ನೌಕರರಿಗೆ ಬಿಸಿ ಮುಟ್ಟಿಸಲು ಸರ್ಕಾರ ಮುಂದಾಗಿದೆ. ‘ಭ್ರಷ್ಟಾಚಾರ ಆರೋಪ ಸಂಬಂಧ ಅಮಾನತಿನಲ್ಲಿ ಇರುವ ಅಥವಾ ವಿಚಾರಣೆಗೆ ಗುರಿಯಾಗಿರುವ ಸರ್ಕಾರಿ ಉದ್ಯೋಗಿಗಳಿಗೆ ಪಾಸ್‌ಪೋರ್ಟ್‌ ನೀಡುವುದಿಲ್ಲ’ ಎಂದು ಸರ್ಕಾರದ ಆದೇಶ ತಿಳಿಸಿದೆ.

ಸರ್ಕಾರಿ ನೌಕರ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದರೆ ಆತನ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲ ಹಾಗೂ ಆತ ವಿಚಾರಣೆಗೆ ಒಳಪಟ್ಟಿಲ್ಲ ಎಂಬುದು ಖಚಿತವಾಗಬೇಕು. ಆತನ ಪಾಸ್‌ಪೋರ್ಟ್‌ಗೆ ಜಾಗೃತ ಆಯೋಗ ‘ನಿರಾಕ್ಷೇಪಣಾ ಪತ್ರ’ (ವಿಜಿಲೆನ್ಸ್‌ ಕ್ಲಿಯರನ್ಸ್‌) ನೀಡಬೇಕು ಎಂದು ಕೇಂದ್ರ ಸರ್ಕಾರದ ಸಿಬ್ಬಂದಿ ಸಚಿವಾಲಯದ ಆದೇಶ ಹೇಳಿದೆ. ಕೇಂದ್ರೀಯ ಜಾಗೃತ ಆಯೋಗ ಹಾಗೂ ವಿದೇಶಾಂಗ ಸಚಿವಾಲಯಗಳ ಜತೆ ಚರ್ಚೆ ನಡೆಸಿ ಈ ನಿರ್ಧಾರ ಪ್ರಕಟಿಸಲಾಗಿದೆ.

ಒಂದು ವೇಳೆ ನೌಕರ ಅಮಾನತಿನಲ್ಲಿ ಇದ್ದರೆ ಅಥವಾ ತನಿಖಾ ಸಂಸ್ಥೆಯು ಆತನ ವಿರುದ್ಧ ಕೋರ್ಟ್‌ನಲ್ಲಿ ಆರೋಪಪಟ್ಟಿದಾಖಲಿಸಿದ್ದರೆ ಆತನಿಗೆ ನೀಡಲಾಗಿರುವ ಜಾಗೃತ ನಿರಾಕ್ಷೇಪಣಾ ಪತ್ರವನ್ನು ತಡೆಹಿಡಿಯಬಹುದು. ನೌಕರನಿಗೆ ಸಂಬಂಧಿಸಿದ ಪ್ರಾಧಿಕಾರವು ಆತನ ಮೇಲೆ ಭ್ರಷ್ಟಾಚಾರ ಅಥವಾ ಕ್ರಿಮಿನಲ್‌ ಪ್ರಕರಣಗಳಲ್ಲಿ ತನಿಖೆಗೆ ಅನುಮತಿ ನೀಡಿದ್ದರೆ ಕೂಡ ಪಾಸ್‌ಪೋರ್ಟ್‌ ನಿರಾಕರಿಸಬಹುದು ಎಂದು ತಿಳಿಸಲಾಗಿದೆ.