ತನ್ನ ವಿಶ್ವ ವ್ಯಾಪಕತೆ ಮತ್ತು ಮಾರಕತೆಯಿಂದಾಗಿ ಕೊರೋನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಅದರಲ್ಲೂ ವೃದ್ಧರನ್ನೇ ಸೋಂಕು ಹೆಚ್ಚಾಗಿ ಬಲಿ ಪಡೆಯುತ್ತಿರುವುದು ಆ ವರ್ಗವನ್ನ ಬಹುವಾಗಿ ಕಾಡಿದೆ.

ಆದರೆ ಮುನ್ನೆಚ್ಚರಿಕಾ ಕ್ರಮಗಳು ಮತ್ತು ಸೂಕ್ತ ಚಿಕಿತ್ಸೆ ಸೋಂಕುಪೀಡಿತ ವೃದ್ಧರನ್ನೂ ಬದುಕಿಸಬಲ್ಲವು ಎಂಬುದಕ್ಕೆ ವಿಶ್ವದಾದ್ಯಂತ ಹಲವು ಉದಾಹರಣೆಗಳು ಸಿಕ್ಕಿವೆ. ಅವುಗಳ ಪೈಕಿ ಒಂದಿಷ್ಟುಇಲ್ಲಿವೆ.

1. ಕೊಟ್ಟಯಂನಲ್ಲಿ 93ರ ವೃದ್ಧ ಗುಣಮುಖ

ಕೇರಳದ ಕೊಟ್ಟಯಂನಲ್ಲಿ ಕೊರೋನಾ ಪೀಡಿರಾಗಿ ಚಿಕಿತ್ಸೆ ಪಡೆಯುತ್ತಿದ್ದ 93 ವರ್ಷದ ಥಾಮಸ್‌ ಅಬ್ರಹಾಂ ಮತ್ತು ಅವರ ಪತ್ನಿ ಮರಿಯಮ್ಮ (88) ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿದ್ದಾರೆ.

ಆ ಮೂಲಕ ಕೊರೋನಾದಿಂದ ಪಾರಾದ ದೇಶದ ಅತೀ ಹಿರಿಯರು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇವರ ಪತ್ನಿ 88 ವರ್ಷದ ಮರಿಯಮ್ಮ ಎಂಬವರಿಗೂ ಸೋಂಕು ತಟ್ಟಿದ್ದು, ಈಗ ಅವರೂ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

2. ಅಮೆರಿಕದಲ್ಲಿ 104 ವರ್ಷದ ವ್ಯಕ್ತಿ ಪಾರು

ವಿಶ್ವದಲ್ಲೇ ಅತೀ ಹೆಚ್ಚು ಸೋಂಕಿತರು ಇರುವ ಅಮೆರಿಕದಲ್ಲಿ ವಿಲಿಯಂ ಬಿಲ್‌ ಲ್ಯಾಪ್ಷಿಸ್‌ (104) ಕೋವಿಡ್‌ ವಿರುದ್ಧ ಸೆಣಸಾಡಿ ಗೆದ್ದಿದ್ದಾರೆ. ಜೊತೆಗೆ ಏ.1ರಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಬಿಲ್‌ಗೆ ಮಾ.5 ರಂದು ಕೋವಿಡ್‌ ಅಂಟಿರುವುದು ದೃಢವಾಗಿತ್ತು. ಬಳಿಕ ಅವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಈ ವಾರ ಮತ್ತೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೊರೋನಾ ವೈರಸ್‌ನಿಂದ ಪಾರಾಗಿದ್ದಾರೆ ಎಂದು ವರದಿ ಬಂದಿದೆ.

3. ಇಟಲಿಯಲ್ಲಿ ಕೊರೋನಾ ಜಯಿಸಿದ 101ರ ವೃದ್ಧ!

ಇಡೀ ವಿಶ್ವದಲ್ಲೇ ಕೊರೋನಾಗೆ ಅತೀ ಹೆಚ್ಚು ಮಂದಿ ಸಾವನ್ನಪ್ಪಿರುವ ಇಟಲಿಯಲ್ಲಿ 101 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿನ ವಿರುದ್ದ ಗುದ್ದಾಡಿ ಗೆದ್ದಿದ್ದಾರೆ. 1919ರ ‘ಸ್ಪಾ್ಯನಿಶ್‌ ಫä್ಲ’ ವೇಳೆ ಜನಿಸಿದ್ದರಿಂದ ಈ ವ್ಯಕ್ತಿಯನ್ನು ‘ಮಿಸ್ಟರ್‌ ಪಿ’ ಎಂದು ಗುರುತಿಸಲಾಗಿದ್ದು, ಕೆಲ ದಿನಗಳ ಹಿಂದೆ ಕೋವಿಡ್‌ ಇರುವುದು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಅವರಲ್ಲಿ ಸೋಂಕು ಮಾಯವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿ ಮನೆ ಮಂದಿಯನ್ನು ಕೂಡಿಕೊಂಡಿದ್ದಾರೆ ಎಂದು ರಿಮಿನಿ ಪ್ರದೇಶದ ಮೇಯರ್‌ ಗ್ಲೋರಿಯಾ ಲಿಸಿ ಹೇಳಿದ್ದಾರೆ.

4. ಎಬೋಲಾ ಔಷಧದಿಂದ 79ರ ವೃದ್ಧ ಗುಣಮುಖ!

ಕೋವಿಡ್‌ ವಿಷಜಾಲಕ್ಕೆ ಬ್ರಿಟನ್‌ನಲ್ಲಿ ತೀವ್ರವಾಗಿ ಬಳಲಿರುವ ಲೊಂಬರ್ಡಿ ಪ್ರದೇಶದಲ್ಲಿ 79ರ ವೃದ್ಧರೊಬ್ಬರಿಗೆ ಎಬೋಲಾ ಔಷಧ ನೀಡಿ ಕೊರೋನಾದಿಂದ ಪಾರು ಮಾಡಲಾಗಿದೆ. ಎಬೋಲಾಗೆ ಅಭಿವೃದ್ದಿ ಪಡಿಸಲಾಗಿದ್ದ ರೈಮ್ಡೆಸಿವಿರ್‌ ಎಂಬ ಔಷಧವನ್ನು ಅವರಿಗೆ ನೀಡಲಾಗಿದೆ. ವೃದ್ಧನಿಗೆ ಜಿಯೋನಾದಲ್ಲಿರುವ ಸ್ಯಾನ್‌ ಮರಿಟೋ ಆಸ್ಪತ್ರೆಯಲ್ಲಿ 12 ದಿನ ಚಿಕಿತ್ಸೆ ನೀಡಲಾಗಿದ್ದು, ಸೋಂಕಿನಿಂದ ಗುಣ ಮುಖರಾಗಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

5. ಇರಾನ್‌ನಲ್ಲಿ 103 ವರ್ಷದ ವೃದ್ಧೆ ಗುಣಮುಖ

ಮಧ್ಯಪ್ರಾಚ್ಯದಲ್ಲಿ ಕೊರೋನಾ ಸಾವಿನ ಬಲೆಗೆ ತತ್ತರಿಸಿ ಹೋಗಿರುವ ಇರಾನ್‌ನಲ್ಲಿ 103 ವರ್ಷದ ವೃದ್ಧೆಯೊಬ್ಬರು ಗುಣ ಮುಖರಾಗಿದ್ದಾರೆ. ಹೆಸರು ಬಹಿರಂಗ ಪಡಿಸದ ವೃದ್ಧೆಯೊಬ್ಬರು ಕೊರೋನಾಗೆ ತುತ್ತಾಗಿ ಸೀಮನ್‌ ನಗರದ ಆಸ್ಪತ್ರೆಗೆ ದಾಖಲಾಗಿದ್ದರು.

ಪ್ರತ್ಯೇಕವಾಗಿರಿಸಿ ವೈದ್ಯರ ತಂಡ ವೃದ್ಧೆಗೆ ಚಿಕಿತ್ಸೆ ನೀಡಿದ್ದು, ಅವರು ಗುಣ ಹೊಂದಿದ್ದಾರೆ. ಇರಾನ್‌ನಲ್ಲಿ ವೈದ್ಯಕೀಯ ಪರಿಕರಗಳ ಕೊರತೆ ಹೊರತಾಗಿಯೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಿ ವೃದ್ಧೆಗೆ ಮರುಜೀವ ದೊರಕಿದಂತಾಗಿದೆ.