ನವದೆಹಲಿ(ಮೇ.20): ಕಚೇರಿಗಳಲ್ಲಿ 1-2 ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆಯಾದರೆ ಈ ಹಿಂದಿನಂತೆ ಇಡೀ ಕಚೇರಿ ಮುಚ್ಚಬೇಕಿಲ್ಲ. ಸರ್ಕಾರದ ನಿಯಮಗಳಿಗೆ ಅನುಸಾರವಾಗಿ ಕಚೇರಿಯನ್ನು ಸ್ವಚ್ಛಗೊಳಿಸಿ ಕೆಲಸ ಪುನಾರಂಭಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

4ನೇ ಲಾಕ್‌ಡೌನ್‌ ವೇಳೆ ಅನುಸರಿಸಬೇಕಾದ ಪರಿಷ್ಕೃತ ಮಾರ್ಗಸೂಚಿಯನ್ನು ಸೋಮವಾರ ಬಿಡುಗಡೆ ಮಾಡಿರುವ ಕೇಂದ್ರ ಆರೋಗ್ಯ ಇಲಾಖೆ, ಒಂದು ವೇಳೆ ಕಚೇರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಸೋಂಕಿತರು ಪತ್ತೆಯಾದರೆ ಇಡೀ ಕಚೇರಿಯನ್ನು 48 ಗಂಟೆಗಳ ಕಾಲ ಮುಚ್ಚಬೇಕು. ಆ 2 ದಿನಗಳ ಕಾಲ ಎಲ್ಲಾ ನೌಕರರೂ ಮನೆಯಿಂದ ಕೆಲಸ ಮಾಡಬೇಕು. ಆ ವೇಳೆಯಲ್ಲಿ ಇಡೀ ಕಟ್ಟಡವನ್ನು ಸರ್ಕಾರದ ನಿಯಮಗಳಿಗೆ ಅನುಸಾರವಾಗಿ ಸ್ವಚ್ಛಗೊಳಿಸಬೇಕು. ನಂತರ ಪುನಃ ಎಲ್ಲರೂ ಕೆಲಸ ಆರಂಭಿಸಬಹುದು ಎಂದು ಸೂಚನೆ ನೀಡಿದೆ.

ಕಚೇರಿಯಲ್ಲಿ ಉಗುಳಿದರೆ ದಂಡ

ಕಚೇರಿಗಳಲ್ಲಿ ಯಾರಾದರೂ ಉಗುಳಿದರೆ ದಂಡ ವಿಧಿಸಬೇಕು ಎಂದು ಕೇಂದ್ರ ಸರ್ಕಾರ ತನ್ನ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿದೆ. ಈ ಕುರಿತು ಆಯಾ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಅಥವಾ ಸ್ಥಳೀಯ ಆಡಳಿತಗಳು ರೂಪಿಸಿರುವ ನಿಯಮಗಳಿಗೆ ಅನುಗುಣವಾಗಿ ದಂಡ ವಿಧಿಸಬೇಕು ಎಂದು ತಿಳಿಸಿದೆ.

ಕಚೇರಿಯಲ್ಲಿ ಸೋಂಕಿನ ಲಕ್ಷಣಗಳಿಲ್ಲದ ಅಥವಾ ಕಡಿಮೆ ಸೋಂಕು ಹೊಂದಿರುವ ಹೆಚ್ಚು ಪ್ರಕರಣಗಳು ಪತ್ತೆಯಾದರೆ ಅಲ್ಲೇ ಒಂದು ಕೊರೋನಾ ಕ್ಲಸ್ಟರ್‌ ಉದ್ಭವವಾಗುವ ಸಾಧ್ಯತೆಯಿರುತ್ತದೆ. ಏಕೆಂದರೆ ಕಚೇರಿಯಲ್ಲಿ ಎಲ್ಲರೂ ಹತ್ತಿರ ಕುಳಿತು ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ನೌಕರರಲ್ಲಿ ಯಾರಿಗಾದರೂ ಜ್ವರದ ಲಕ್ಷಣಗಳು ಕಾಣಿಸಿದರೆ ಅವರು ಕಚೇರಿಗೆ ಹೋಗದೆ ವೈದ್ಯರ ಬಳಿಗೆ ಹೋಗಬೇಕು. ತಮಗೆ ಕೊರೋನಾ ಖಚಿತವಾದರೆ ಕೂಡಲೇ ಕಚೇರಿಗೆ ತಿಳಿಸಬೇಕು. ಯಾವುದೇ ನೌಕರ ಕಂಟೇನ್ಮೆಂಟ್‌ ಪ್ರದೇಶದಿಂದ ಕಚೇರಿಗೆ ಬರುತ್ತಿದ್ದರೆ ಆತ ಹೋಂ ಕ್ವಾರಂಟೈನ್‌ಗೆ ಮನವಿ ಮಾಡಿದರೆ ಕಚೇರಿ ಅದಕ್ಕೆ ಅನುಮತಿ ನೀಡಬೇಕು. ಕಚೇರಿಯಲ್ಲಿ ಯಾರಿಗಾದರೂ ಸಣ್ಣ ಪ್ರಮಾಣದ ಕೊರೋನಾ ಲಕ್ಷಣಗಳು ಕಾಣಿಸಿದರೆ ಅವರನ್ನು ಪ್ರತ್ಯೇಕವಾಗಿ ಕೂರಿಸಿ, ನಂತರ ವೈದ್ಯರ ಬಳಿಗೆ ಕಳುಹಿಸಬೇಕು. ಕೆಲಸದ ಸ್ಥಳದಲ್ಲಿ ಎಲ್ಲರೂ ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.