ನಶೆ ಏರುತ್ತಿಲ್ಲ ಎಂದು ಕುಡುಕನ ದೂರು: ತನಿಖೆಗೆ ಆದೇಶ
* ಉಜ್ಜಯಿನಿಯಲ್ಲಿ ಕಲಬೆರಕೆ ಮದ್ಯ ಮಾರಾಟ ಆರೋಪ
* ನಶೆ ಏರುತ್ತಿಲ್ಲ ಎಂದು ಕುಡುಕನ ದೂರು: ತನಿಖೆಗೆ ಆದೇಶ
* ಅಬಕಾರಿ ಆಯೋಗದಲ್ಲಿ ದೂರು ದಾಖಲು
ಉಜ್ಜಯಿನಿ(ಮೇ.09): ಆಹಾರ, ಹಾಲು, ಎಣ್ಣೆ ಹಾಗೂ ಇನ್ನಿತರ ವಸ್ತುಗಳಲ್ಲಿ ಕಲಬೆರಕೆ ನಡೆಯುತ್ತಿರುವ ಕುರಿತು ಆಗಾಗ ದೂರುಗಳು ದಾಖಲಾಗುತ್ತದೆ. ಆದರೆ ಮಧ್ಯ ಪ್ರದೇಶದ ಉಜ್ಜಯಿನಿಯ ವ್ಯಕ್ತಿಯೊಬ್ಬನು ಕುಡಿದಾಗ ನಶೆಯೇರುತ್ತಿಲ್ಲ ಎಂಬ ಕಾರಣಕ್ಕೆ ದೂರು ಸಲ್ಲಿಸಿದ್ದಾನೆ. ಇದರ ಬೆನ್ನಲ್ಲೇ ಸರ್ಕಾರ ತನಿಖೆಗೆ ಆದೇಶಿಸಿದೆ.
ಲೋಕೇಶ್ ಸೋಥಿಯಾ ಎಂಬ ವ್ಯಕ್ತಿಯು ಏ. 12 ರಂದು ಸ್ಥಳೀಯ ಮದ್ಯದಂಗಡಿಯಿಂದ 4 ಬಾಟಲಿ ಮದ್ಯವನ್ನು ಖರೀದಿಸಿದ್ದ. ‘ಆದರೆ 2 ಬಾಟಲಿ ಮದ್ಯವನ್ನು ಕುಡಿದರೂ ನಶೆಯೇರಲಿಲ್ಲ. ಇದಕ್ಕೆ ಕಾರಣ ಮದ್ಯದಲ್ಲಿ ನೀರನ್ನು ಬೆರಸಲಾಗಿದೆ’ ಎಂದು ಆರೋಪಿಸಿದ್ದಾನೆ. ಅಲ್ಲದೆ, ಕುಡಿಯದೇ ಇರುವ ಇನ್ನೆರಡು ಬಾಟಲಿಗಳಲ್ಲಿರುವ ಮದ್ಯವನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಹಾಗೂ ಉಜ್ಜೈನಿಯ ಅಬಕಾರಿ ಆಯೋಗದ ಅಧಿಕಾತಿ ಇಂದರ್ ಸಿಂಗ್ ದಾಮೋರ್ ಅವರಿಗೆ ದೂರು ಸಲ್ಲಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ಅಬಕಾರಿ ಆಯೋಗದವರು ಸೋಥಿಯಾನ ದೂರನ್ನು ಸ್ವೀಕರಿಸಿದ್ದು, ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ ಸೋಥಿಯಾ ಅವರು ಗ್ರಾಹಕರ ವೇದಿಕೆಯಲ್ಲೂ ಕಲಬೆರಕೆ ಮಾಡಿದ್ದಕ್ಕಾಗಿ ಅಂಗಡಿಯಾತನ ವಿರುದ್ಧ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ.
ಅಕ್ರಮ ಮದ್ಯ ಮಾರಾಟ ತಡೆಕೋರಿ ಗ್ರಾಮಸ್ಥರಿಂದ ಮನವಿ
ನೂರಾರು ಜನರಿಗೆ ತೊಂದರೆಯಾಗುತ್ತಿದೆ. ಕೂಡಲೇ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಬುಧವಾರ ತಹಸೀಲ್ದಾರ್, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗ್ರಾಮದ ಮುಖಂಡರಾದ ವೀರೇಶ್, ಎಂ.ಎಸ್.ಶ್ರೀನಿವಾಸ್, ಎಸ್. ಕಾಟಮ್ಮ, ಚಿತ್ತಪ್ಪ, ಜಯಣ್ಣ, ತಿಪ್ಪೇಸ್ವಾಮಿ ಮುಂತಾದವರು ಮಾತನಾಡಿ, ಬೆಳಗಿನಿಂದ ರಾತ್ರಿಯ ತನಕ ಗ್ರಾಮದ ಬಹುತೇಕ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಇದರಿಂದ ಕುಡುಕರ ಸಂಖ್ಯೆ ಮಿತಿಮೀರಿ ಬೆಳೆದಿದೆ. ಪ್ರತಿನಿತ್ಯವೂ ಸಾರ್ವಜನಿಕವಾಗಿ ಕೆಟ್ಟಶಬ್ಧಗಳಿಂದ ಕೂಗುವುದು ಸ್ವಾಭಾವಿಕವಾಗಿದೆ. ಇದರಿಂದ ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದ್ದು, ತಹಸೀಲ್ದಾರ್ ಹಾಗೂ ಸಂಬಂಧಪಟ್ಟಅಧಿಕಾರಿಗಳು ಈ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಎನ್.ರಘುಮೂರ್ತಿ, ಗ್ರಾಮಸ್ಥರು ಅಕ್ರಮ ಮದ್ಯ ಮಾರಾಟ ತಡೆಯುವಂತೆ ಕೋರಿ ನೀಡಿರುವ ಮನವಿಯನ್ನು ಸಂಬಂಧಫಟ್ಟಇಲಾಖೆ ಅಧಿಕಾರಿಗಳಿಗೆ ಈ ಕೂಡಲೇ ರವಾನಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು ಎಂದರು.