ಬಂಗಾಳದಲ್ಲಿ ಯಾರೂ ಹೊರಗಿನವರಲ್ಲ: ಮೋದಿ| ಬಿಜೆಪಿ ಗೆದ್ದರೆ ಮಣ್ಣಿನ ಮಗನೇ ಮುಖ್ಯಮಂತ್ರಿ| ವಂದೇ ಮಾತರಂ ಎಂದ ನೆಲದಲ್ಲಿ ಇಂಥ ಹೇಳಿಕೆ| ದೀದಿಗೆ ಮೋದಿ ತಿರುಗೇಟು
ಕಾಂತಿ (ಮಾ.25): ‘ವಂದೇ ಮಾತರಂ’ ಹಾಡಿನ ಮೂಲಕ ಬಂಗಾಳ ಇಡೀ ದೇಶವನ್ನು ಒಂದುಗೂಡಿಸಿದೆ. ಆದರೆ ಇಂಥ ನೆಲದಲ್ಲಿ ನಿಂತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಹೊರಗಿನವರು’ ಎಂಬ ಪದ ಬಳಸಿದ್ದಾರೆ. ಆದರೆ ಯಾವೊಬ್ಬ ಭಾರತೀಯನೂ ಬಂಗಾಳದಲ್ಲಿ ಹೊರಗಿನವರಲ್ಲ ಎಂದು ಪ್ರಧಾನಿ ಮೋದಿ ಬುಧವಾರ ತಿರುಗೇಟು ನೀಡಿದರು.
ಇದೇ ವೇಳೆ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಮಣ್ಣಿನ ಮಗನನ್ನೇ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ ಎಂದು ಘೋಷಿಸಿದರು.
ಪುರ್ಬಾ ಮೇದಿನಪುರ್ ಜಿಲ್ಲೆಯಲ್ಲಿ ನಡೆದ ಚುನಾವಣಾ ರಾರಯಲಿ ವೇಳೆ, ಮಮತಾ ಬ್ಯಾನರ್ಜಿ ಅವರ ‘ಹೊರಗಿನವರು ವರ್ಸಸ್ ಒಳಗಿನವರು’ ಹೇಳಿಕೆ ಖಂಡಿಸಿದ ಮೋದಿ ಅವರು, ‘ಬಂಗಾಳ ಬಂಕಿಮ ಚಂದ್ರ ಚಟರ್ಜಿ, ರವೀಂದ್ರನಾಥ್ ಠಾಗೋರ್ ಮತ್ತು ಸುಭಾಷ್‌ಚಂದ್ರ ಬೋಸ್ ಅವರ ಜನ್ಮಭೂಮಿ. ಇಲ್ಲಿ ಯಾವೊಬ್ಬ ಭಾರತೀಯನೂ ಹೊರಗಿನವರಲ್ಲ. ಎಲ್ಲರೂ ಭಾರತಾಂಬೆಯ ಮಕ್ಕಳು’ ಎಂದು ಹೇಳಿದರು.
ಅಲ್ಲದೆ, ನಮ್ಮನ್ನು ಪ್ರವಾಸಿಗರು ಎಂದು ಹೀಗಳೆಯಲಾಗುತ್ತಿದೆ, ಅಪಹಾಸ್ಯ ಮಾಡಲಾಗುತ್ತಿದೆ. ದೀದಿ, ಬಂಗಾಳದ ಜನ ಯಾರನ್ನೂ ಹೊರಗಿನವರೆಂದು ಪರಿಗಣಿಸಲ್ಲ ಎಂದರು.
