ನವದೆಹಲಿ(ಜ.07): ಕೇಂದ್ರ ಸರ್ಕಾರ ಇತ್ತೀಚೆಗೆ ಅಂಗೀಕರಿಸಿದ ಮೂರು ಕೃಷಿ ಕಾಯ್ದೆ ಪ್ರಶ್ನಿಸಿ ಸಲ್ಲಿಸಿರುವ ಹಲವು ಅರ್ಜಿಗಳನ್ನು ಒಂದುಗೂಡಿಸಿ ಜ.11ರಂದು ವಿಚಾರಣೆ ಮಾಡುವುದಾಗಿ ಸುಪ್ರೀಂಕೋರ್ಟ್‌ ತಿಳಿಸಿದೆ.

ಇದೇ ವೇಳೆ ಪ್ರತಿಭಟನಾನಿರತ ರೈತರು ಮತ್ತು ಸರ್ಕಾರಗಳು ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗುವುದನ್ನು ನಾವು ಸದಾ ಬೆಂಬಲಿಸುತ್ತೇವೆ. ಆದರೆ ವಾಸ್ತವ ಪರಿಸ್ಥಿತಿ ಸ್ವಲ್ಪವೂ ಸುಧಾರಣೆಯಾಗಿಲ್ಲ ಎಂದು ಮುಖ್ಯ ನ್ಯಾಯಾಧೀಶ ಎಸ್‌.ಎ ಬೋಬ್ಡೆ ನೇತೃತ್ವದ ಪೀಠ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ವೇಳೆ ನೂತನ ಕೃಷಿ ಕಾಯ್ದೆಗಳಿಂದ ಉದ್ಭವವಾದ ಬಿಕ್ಕಟ್ಟು ಇತ್ಯರ್ಥಕ್ಕೆ ಉಭಯ ಪಕ್ಷಗಳಿಗೆ ಉತ್ತಮ ಅವಕಾಶವಿದ್ದು, ಶೀಘ್ರವೇ ಮಾತುಕತೆ ಮೂಲಕ ಸಮಸ್ಯೆ ಪರಿಹಾರವಾಗಲಿದೆ. ಜೊತೆಗೆ ರೈತರು ಮತ್ತು ಸರ್ಕಾರದ ಪ್ರತಿನಿಧಿಗಳ ಜೊತೆ ಈಗಾಗಲೇ ಸಭೆ ನಿಗದಿಯಾಗಿದ್ದು, ಯಾವುದೇ ಕಾರಣಕ್ಕೂ ಜ.8ಕ್ಕೆ ಈ ಕುರಿತಾದ ವ್ಯಾಜ್ಯದ ವಿಚಾರಣೆಗೆ ಸುಪ್ರೀಂ ಪೀಠ ಮುಂದಾಗಬಾರದು ಎಂದು ಸರ್ಕಾರದ ಪರ ಅಟಾರ್ನಿ ಜನರಲ್‌ ಕೆ.ಕೆ ವೇಣುಗೋಪಾಲ್‌ ಮತ್ತು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಕೋರಿಕೊಂಡರು.