ನವದೆಹಲಿ[ಜ.02]: ಸಾವಿರಾರು ಕೋಟಿಯ ಒಡೆಯ, ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಆಸ್ತಿ, ಐಷಾರಾಮಿ ಜೀವನ. ಒಂದು ರಾಜ್ಯದ ಮುಖ್ಯಮಂತ್ರಿ ಅಂದಾಕ್ಷಣ ಜನ ಸಾಮಾನ್ಯರ ತಲೆಯಲ್ಲಿ ಓಡುವ ಸಾಮಾನ್ಯ ಯೋಚನೆಯಿದು. ಆದರೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಆಸ್ತಿ ಕಳೆದ ವರ್ಷಕ್ಕಿಂತ ಈ ಬಾರಿ ಇಳಿಕೆಯಾಗಿದೆಯಂತೆ.

ಎರಡು ಹಸು ಹಾಗೂ ಒಂದು ಕರು ಹೆಚ್ಚಾಗಿದ್ದು ಬಿಟ್ಟರೆ, ಉಳಿದ ಆಸ್ತಿ ಕರಗಿದೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ತಮ್ಮ ಹಾಗೂ ತಮ್ಮ ಸಂಪುಟ ಸಹೋದ್ಯೋಗಿಗಳ ವಾರ್ಷಿಕ ಆದಾಯವನ್ನು ಸರ್ಕಾರಿ ವೆಬ್‌ಸೈಟ್‌ನಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರ ಪ್ರಕಟಿಸಿದ್ದು, ಕಳೆದ ಬಾರಿ 6 ಹಸುಗಳನ್ನು ಹೊಂದಿದ್ದ ನಿತೀಶ್‌ ಈ ಬಾರಿ 8 ಹಸುಗಳನ್ನು ಹೊಂದಿದ್ದಾರೆ.

ಕಳೆದ ಬಾರಿಗಿಂತ ಕರುವಿನ ಸಂಖ್ಯೆಯಲ್ಲಿ ಒಂದು ಹೆಚ್ಚಳವಾಗಿದ್ದು, ಏಳಕ್ಕೇರಿದೆ. ಕಳೆದ ಬಾರಿ 42 ಸಾವಿರ ರು. ಇದ್ದ ನಗದು 38,039ಕ್ಕೆ ಇಳಿದಿದ್ದು, ಒಟ್ಟು 16 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಆಶ್ಚರ್ಯ ಎಂದರೆ ಅವರ ಪುತ್ರ ನಿಶಾಂತ್‌ ಕುಮಾರ್‌ ತಮ್ಮ ದಿವಂಗತ ತಾಯಿಯಿಂದ ಬಂದ ಆಸ್ತಿ ಸೇರಿ ಒಟ್ಟು 1.39 ಕೋಟಿ ಚರಾಸ್ತಿ ಹಾಗೂ 1.48 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.