ಪೌರತ್ವ ಕಾಯ್ದೆ ವಾಪಸ್ ಆಗುತ್ತಾ? : ಗೃಹ ಸಚಿವರ ಸ್ಪಷ್ಟನೆ ಏನು?
ದೇಶದಲ್ಲಿ ಭಾರೀ ಹಿಂಸಾಚಾರಕ್ಕೆ ಕಾರಣವಾದ ಪೌರತ್ವ ಕಾಯ್ದೆಯನ್ನು ವಾಪಸ್ ಪಡೆಯುತ್ತಾ ಕೇಂದ್ರ ಸರ್ಕಾರ ಈ ಬಗ್ಗೆ ಕೇಂದ್ರ ಗೃಹ ಸಚಿವರು ನೀಡಿರುವ ಸ್ಪಷ್ಟನೆ ಏನು ?
ಜೋಧಪುರ [ಜ.04]: ಪೌರತ್ವ ತಿದ್ದುಪಡಿ ಕಾಯ್ದೆಗೆ ಜಾರಿಗೆ ವಿಪಕ್ಷಗಳ ಭಾರೀ ವಿರೋಧದ ಹೊರತಾಗಿಯೂ, ಕಾಯ್ದೆ ಜಾರಿಯ ನಿರ್ಧಾರದಿಂದ ಒಂದು ಇಂಚೂ ಕದಲುವುದಿಲ್ಲ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕಾಯ್ದೆ ಜಾರಿ ವಿರೋಧಿಸಿ ವಿಧಾನಸಭೆಯಲ್ಲಿ ಗೊತ್ತುವಳಿ ಅಂಗೀಕರಿಸಿದ್ದ ಕೇರಳ ಸರ್ಕಾರಕ್ಕೆ ಮತ್ತು ಕಾಯ್ದೆಯನ್ನು ಬಹುವಾಗಿ ವಿರೋಧಿಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಸ್ಪಷ್ಟಸಂದೇಶ ರವಾನಿಸುವ ಯತ್ನ ಮಾಡಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ತವರು ಕ್ಷೇತ್ರದಲ್ಲಿ, ಕಾಯ್ದೆಯ ಕುರಿತ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಮತಬ್ಯಾಂಕ್ ಮೇಲೆ ಕಣ್ಣಿಟ್ಟು ಕಾಯ್ದೆಯ ಬಗಗೆ ತಪ್ಪು ಮಾಹಿತಿ ನೀಡಿ ಅಪಪ್ರಚಾರ ನಡೆಸುತ್ತಿವೆ. ಮುಸ್ಲಿಮರನ್ನು ತಪ್ಪುದಾರಿಗೆ ಎಳೆಯುತ್ತಿವೆ. ಈ ಕಾಯ್ದೆಯು ಯಾವ ಭಾರತೀಯ ನಾಗರಿಕರ ಹಕ್ಕನ್ನೂ ಈ ಕಾಯ್ದೆ ಕಸಿದುಕೊಳ್ಳುವುದಿಲ್ಲ. ಬದಲಾಗಿ ಪೌರತ್ವ ನೀಡುವ ಕಾಯ್ದೆಯಿದು’ ಎಂದು ಸ್ಪಷ್ಟಪಡಿಸಿದರು.
‘ಪೌರತ್ವ ಕಾಯ್ದೆಯ ಬಗ್ಗೆ ಜನಜಾಗೃತಿ ಮೂಡಿಸಲು ದೇಶಾದ್ಯಂತ ಬಿಜೆಪಿ 500 ರಾರಯಲಿಗಳನ್ನು ಹಮ್ಮಿಕೊಳ್ಳಲಿದೆ. 3 ಕೋಟಿ ಜನರನ್ನು ತಲುಪುವ ಉದ್ದೇಶವನ್ನು ಹೊಂದಲಾಗಿದೆ. ಕಾಯ್ದೆಯ ಬಗ್ಗೆ ಪ್ರತಿಪಕ್ಷಗಳು ಅಪಪ್ರಚಾರ ಮಾಡುತ್ತಿರುವ ಕಾರಣಕ್ಕೆ ಜನಜಾಗೃತಿ ಆಂದೋಲನ ಹಮ್ಮಿಕೊಳ್ಳಬೇಕಿದೆ. ಈ ಪಕ್ಷಗಳೆಲ್ಲ ಒಂದಾಗಿ ಬರಲಿ. ಆದರೆ ಬಿಜೆಪಿ ಈ ಕಾಯ್ದೆ ವಿಚಾರದಲ್ಲಿ ಒಂದಿಂಚೂ ಹಿಂದೆ ಸರಿಯುವುದಿಲ್ಲ’ ಎಂದು ಖಂಡತುಂಡವಾಗಿ ಹೇಳಿದರು.
‘ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಜಾತಿ ತಾರತಮ್ಯ ಮಾಡಿಲ್ಲ. ಯಾವುದೇ ಧರ್ಮವನ್ನು ಹೊರಗಿಟ್ಟಿಲ್ಲ. ಪಾಕಿಸ್ತಾನ, ಆಷ್ಘಾನಿಸ್ತಾನ, ಬಾಂಗ್ಲಾದೇಶದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಅಥವಾ ಕ್ರೈಸ್ತ- ಯಾರನ್ನೂ ಹೊರಗಿಟ್ಟಿಲ್ಲ’ ಎಂದು ಶಾ ಸ್ಪಷ್ಟಪಡಿಸಿದರು.
ರಾಹುಲ್ ಬಗ್ಗೆ ವ್ಯಂಗ್ಯ:
ಇದೇ ವೇಳೆ, ರಾಹುಲ್ ಗಾಂಧಿ ಅವರಿಗೆ ಸವಾಲು ಹಾಕಿದ ಶಾ, ‘ರಾಹುಲ್ ಬಾಬಾ.. ನೀವು ಪೌರತ್ವ ಕಾಯ್ದೆ ಬಗ್ಗೆ ಓದಿಕೊಂಡಿದ್ದರೆ ಚರ್ಚೆಗೆ ಬನ್ನಿ. ಓದಿಲ್ಲ ಎಂದಾದರೆ ಅದನ್ನು ಇಟಲಿ ಭಾಷೆಗೆ ಭಾಷಾಂತರಿಸಿಕೊಡುವೆ’ ಎಂದು ರಾಹುಲ್‌ರ ತಾಯಿ ಸೋನಿಯಾ ಗಾಂಧಿ ಅವರ ಇಟಲಿ ಮೂಲವನ್ನು ಉದ್ದೇಶಿಸಿ ವ್ಯಂಗ್ಯವಾಡಿದರು.
‘ಕಾಂಗ್ರೆಸ್ ಪಕ್ಷ ಕೂಡ ನೆರೆ ದೇಶಗಳ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುವ ಬಗ್ಗೆ ಈ ಹಿಂದೆ ಮಾತನಾಡಿತ್ತು. ರಾಜಸ್ಥಾನದ ಕಳೆದ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಈ ಭರವಸೆ ನೀಡಿತ್ತು. ಆದರೆ ತನ್ನ ಮತ ಬ್ಯಾಂಕ್ ಛಿದ್ರವಾಗುವ ಭೀತಿಯಿಂದ ಈ ಕ್ರಮಕ್ಕೆ ಮುಂದಾಗಲಿಲ್ಲ. ಮಹಾತ್ಮಾ ಗಾಂಧಿ ಅವರೂ ಈ ಭರವಸೆ ನೀಡಿದ್ದರು. ಹಾಗಿದ್ದರೆ ಅವರು ಕೋಮುವಾದಿಯೇ? ನೆಹರು ಕೂಡ ಸಂಸತ್ತಿನಲ್ಲಿ ಪಾಕ್ ಹಿಂದೂಗಳು ಹಾಗೂ ಸಿಖ್ಖರಿಗೆ ಪೌರತ್ವ ನೀಡುವುದಾಗಿ ಹೇಳಿದ್ದರು. ಅವರೂ ಕೋಮುವಾದಿಯೇ?’ ಎಂದು ಗೃಹ ಸಚಿವರು ಪ್ರಶ್ನಿಸಿದರು.
ಎನ್‌ಆರ್‌ಸಿ: ಮೋದಿ ಮಾತು ನಿಜವೊ, ಶಾ ಮಾತೋ?...
‘ಪಾಕ್, ಬಾಂಗ್ಲಾ, ಆಷ್ಘಾನಿಸ್ತಾನದಿಂದ ಭಾರತಕ್ಕೆ ಬಂದ ನಿರಾಶ್ರಿತರು ಮೂಲ ಭಾರತೀಯರೇ. ಅಲ್ಪಸಂಖ್ಯಾತರ ರಕ್ಷಣೆಗೆ ಅಂದು ನೆಹರು ಹಾಗೂ ಪಾಕಿಸ್ತಾನದ ಲಿಯಾಖತ್ ಅಲಿ ಖಾನ್ ಮಾಡಿಕೊಂಡಿದ್ದ ಒಪ್ಪಂದವನ್ನು ನಾವು ಜಾರಿಗೊಳಿಸುತ್ತಿದ್ದೇವಷ್ಟೇ. ನಿರಾಶ್ರಿತರು ಹೆಮ್ಮೆಯಿಂದ ನಾವು ಭಾರತೀಯರು ಎಂದು ಹೇಳಿಕೊಳ್ಳಬಹುದು’ ಎಂದರು.
ಪಾಕಿಸ್ತಾನಿ ನಿರಾಶ್ರಿತರ ಭೇಟಿ:
ಈ ನಡುವೆ ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ರಾಜಸ್ಥಾನದಲ್ಲಿ ಬಂದು ನೆಲೆಸಿರುವ ಪಾಕ್‌ನ ಮುಸ್ಲಿಮೇತರ ಅಲ್ಪಸಂಖ್ಯಾತ ನಿರಾಶ್ರಿತರನ್ನು ಅಮಿತ್ ಶಾ ಭೇಟಿ ಮಾಡಿದರು. ಈ ವೇಳೆ, ತಮಗೆ ಪೌರತ್ವ ಕಲ್ಪಿಸಿದ್ದಕ್ಕಾಗಿ ಶಾ ಅವರಿಗೆ ನಿರಾಶ್ರಿತರು ಕೃತಜ್ಞತೆ ಸಲ್ಲಿಸಿದರು.