ನವದೆಹಲಿ(ಫೆ.08): ಕೇಂದ್ರದ ಮೂರು ಕೃಷಿ ಕಾನೂನು ವಿರುದ್ಧ ಭಾನುವಾರ ಹರ್ಯಾಣದ ಭಿವಾನಿ ಜಿಲ್ಲೆಯ ಕಿತ್ಲಾನಾದಲ್ಲಿ ಆಯೋಜಿಸಲಾಗಿದ್ದ ರೈತ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರೈತ ನಾಯಕ ರಾಕೇಶ್ ಟಿಕಾಯತ್ ಕೃಷಿ ಮಸೂದೆ ಹಿಂಪಡೆಯದಿದ್ದರೆ, ಧಾನ್ಯಗಳನ್ನು ಖಜಾನೆಯಲ್ಲಿ ಬಚ್ಚಿಡಬೇಕಾದ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.

ಸಂಯುಕ್ತ ರೈತ ಮೋರ್ಚಾ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ರೈತರ ಬಳಿ ಒಗ್ಗಟ್ಟಿನಿಂದಿರಲು ಟಿಕಾಯತ್ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಮತ್ತಷ್ಟು ಎಚ್ಚರದಿಂದಿರುವಂತೆ ಸೂಚಿಸಿರುವ ಟಿಕಾಯತ್ ಬಿಜೆಪಿಯ ಕೆಲ ನಾಯಕರು ಈಗಾಗಲೇ ಪ್ರತಿಭಟನಾನಿರತ ರೈತರನ್ನು ಸಿಖ್ಖರು ಹಾಗೂ ಸಿಖ್‌ ಅಲ್ಲದವರು ಎಂದು ಬೇರ್ಪಡಿಸುವ ಯತ್ನ ಆರಂಭಿಸಿದ್ದಾರೆ ಎಂದಿದ್ದಾರೆ.

ಕೇಂದ್ರದ ಕಪ್ಪು ಕಾನೂನಿಂದ ರೈತನ ನಾಶ

ಇವರು ತಮ್ಮ ಉದ್ದೇಶದಲ್ಲಿ ಸಫಲರಾಗಿಲ್ಲ, ಬದಲಾಗಿ ಇದರಿಂದಾಗಿ ಹರ್ಯಾಣ ಹಾಗೂ ಪಂಜಾಬ್‌ನ ರೈತರ ನಡುವಿನ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಿದೆ. ಕೆಂದ್ರದ ಮೂರು ಕಪ್ಪು ಕಾನೂನಿನಿಂದ ರೈತರು ನಾಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಆರೋಪಿಸಿದ್ದಾರೆ.