* ರಾಹುಲ್‌ ಗಾಂಧಿ ಅವರಷ್ಟು ದೊಡ್ಡ ವ್ಯಕ್ತಿ ಹಾಗೂ ಅವರಿಗೆ ಸಮನಾದ ವ್ಯಕ್ತಿ ನಾನಲ್ಲ* ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ಹೇಳಿಕೆ* ಕಾಂಗ್ರೆಸ್‌ ಸೇರುವ ಆಹ್ವಾನ ತಿರಸ್ಕರಿಸಿದ್ದ ಪ್ರಶಾಂತ್ ಕಿಶೋರ್

ನವದೆಹಲಿ(ಮೇ.06): ‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಗ್ಗೆ ಯಾವುದೇ ಅಸಮಾಧಾನ ಹೊಂದಿಲ್ಲ. ರಾಹುಲ್‌ ಗಾಂಧಿ ಅವರಷ್ಟುದೊಡ್ಡ ವ್ಯಕ್ತಿ ಹಾಗೂ ಅವರಿಗೆ ಸಮನಾದ ವ್ಯಕ್ತಿ ನಾನಲ್ಲ’ ಎಂದು ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

ಇತ್ತೀಚೆಗೆ ಕಿಶೋರ್‌ ಕಾಂಗ್ರೆಸ್‌ ಸೇರುವ ಆಹ್ವಾನ ತಿರಸ್ಕರಿಸಿದ್ದರು. ಇದಕ್ಕೆ ರಾಹುಲ್‌ ಕುರಿತು ಅವರು ಹೊಂದಿರುವ ಅತೃಪ್ತಿ ಕಾರಣ ಎಂದು ಹೇಳಲಾಗಿತ್ತು. ಇದನ್ನು ಕಿಶೋರ್‌ ತಳ್ಳಿಹಾಕಿದ್ದಾರೆ.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ರಾಹುಲ್‌ ಜತೆ ಮನಸ್ತಾಪ ಇಲ್ಲ. ರಾಹುಲ್‌ ಅವರು ದೊಡ್ಡ ಮನುಷ್ಯರು. ನಾನು ಸಾಮಾನ್ಯ ಕುಟುಂಬದಿಂದ ಬಂದವನು. ರಾಹುಲ್‌ರಂತಹ ಶ್ರೇಷ್ಠ ವ್ಯಕ್ತಿಯೊಡನೆ ನಾನು ಯಾವ ಸಮಸ್ಯೆ ಎದುರಿಸಬಹುದು? ಅವರೊಂದಿಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ಅವರು ನನಗೆ ಕರೆ ಮಾಡಿದರು, ಮಾತನಾಡಿದರು. ಅವರು ಕರೆ ಮಾಡದಿದ್ದರೆ ಮತ್ತು ಮಾತನಾಡಲು ಬಯಸದಿದ್ದರೆ, ಅವರೊಂದಿಗೆ ನಾನು ಮಾತನಾಡಲು ಆಗುತ್ತಿರಲಿಲ್ಲ. ನಂಬಿಕೆ ಕೊರತೆ ಸಮಾನರೊಂದಿಗೆ ಆಗುತ್ತದೆ. ನಾನು ರಾಹುಲ್‌ ಅವರ ಸಮಾನನಲ್ಲ’ ಎಂದರು

 ‘ಜನ ಸುರಾಜ್‌’ ವೇದಿಕೆ ಸ್ಥಾಪನೆ, 3000 ಕಿಮೀ ಪಾದಯಾತ್ರೆ

ಪ್ರಸಿದ್ಧ ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ಸದ್ಯಕ್ಕೆ ರಾಜಕೀಯ ಪಕ್ಷ ಸ್ಥಾಪನೆ ಮಾಡುವುದಿಲ್ಲ ಎಂದು ಪ್ರಕಟಿಸಿದ್ದು, ಜನ ಸುರಾಜ್‌ ಎಂಬ ವೇದಿಕೆ ಸ್ಥಾಪಿಸುವ ಮೂಲಕ ಬಿಹಾರದ ಜನರಲ್ಲಿ ಅಭಿವೃದ್ಧಿಯ ‘ಹೊಸ ಚಿಂತನೆ ಹಾಗೂ ಹೊಸ ಪ್ರಯತ್ನ’ವನ್ನು ಮೂಡಿಸಲು ಯತ್ನಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಅ.2ರಿಂದ ಬಿಹಾರದಲ್ಲಿ 3000 ಕಿ.ಮೀ. ಪಾದಯಾತ್ರೆ ನಡೆಸುವುದಾಗಿಯೂ ಘೋಷಿಸಿದ್ದಾರೆ.

ಕಾಂಗ್ರೆಸ್‌ ಪಕ್ಷ ಸೇರುವ ಆಹ್ವಾನವನ್ನು ಇತ್ತೀಚೆಗಷ್ಟೇ ತಿರಸ್ಕರಿಸಿದ್ದ ಪ್ರಶಾಂತ್‌ ಕಿಶೋರ್‌ ಬಿಹಾರದಲ್ಲಿ ಸಕ್ರಿಯ ರಾಜಕಾರಣಕ್ಕೆ ಧುಮುಕಲಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ದೇಶದ ರಾಜಕಾರಣದಲ್ಲಿ ಹಿಂಬದಿಯ ಆಟಗಾರನಾಗಿ ಸಾಕಷ್ಟುಕೆಲಸ ಮಾಡಿದ್ದಾಗಿದೆ. ಈಗ ಸಮಾನಮನಸ್ಕರ ಜೊತೆ ಸೇರಿ ನನ್ನ ತವರು ರಾಜ್ಯ ಬಿಹಾರವನ್ನು ಅಭಿವೃದ್ಧಿಗೊಳಿಸಲು ಜನ ಸುರಾಜ್‌ ವೇದಿಕೆ ಸ್ಥಾಪಿಸುತ್ತಿದ್ದೇನೆ. ಸುಮಾರು 18 ಸಾವಿರ ಜನ ನನ್ನೊಂದಿಗಿದ್ದಾರೆ. ಅ.2ರಿಂದ ರಾಜ್ಯದಲ್ಲಿ 3000 ಕಿ.ಮೀ. ಪಾದಯಾತ್ರೆ ನಡೆಸಿ, ಸಮಾನಮನಸ್ಕರೊಂದಿಗೆ ಸಂವಾದ ನಡೆಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಹೇಳಿದರು.

ಎರಡು ವರ್ಷಗಳ ಹಿಂದೆ ಜೆಡಿಯುದಿಂದ ಉಚ್ಚಾಟನೆಗೊಂಡಾಗ ಪ್ರಶಾಂತ್‌ ಕಿಶೋರ್‌ ಇಂತಹುದೇ ‘ಬಾತ್‌ ಬಿಹಾರ್‌ ಕಿ’ ಎಂಬ ಆಂದೋಲನ ಘೋಷಿಸಿದ್ದರು. ಆದರೆ ಕೋವಿಡ್‌ನಿಂದಾಗಿ ಅದು ಸ್ಥಗಿತಗೊಂಡಿತ್ತು.

ಮುಂದೆ ರಾಜಕೀಯ ಪಕ್ಷ ಸ್ಥಾಪನೆ ಸಾಧ್ಯತೆ:

ಸದ್ಯಕ್ಕೆ ಬಿಹಾರದಲ್ಲಿ ಚುನಾವಣೆ ಇಲ್ಲ. ಹೀಗಾಗಿ ರಾಜಕೀಯ ಪಕ್ಷ ಸ್ಥಾಪಿಸುವ ಯೋಚನೆಯೂ ಇಲ್ಲ. ಹಾಗಂತ ಮುಂದೆ ಸ್ಥಾಪಿಸಬಾರದು ಎಂದೇನಿಲ್ಲ ಎಂದೂ ಪ್ರಶಾಂತ್‌ ಕಿಶೋರ್‌ ಹೇಳಿದರು.

‘ಮುಂದಿನ ಮೂರು-ನಾಲ್ಕು ವರ್ಷಗಳನ್ನು ಜನರ ಜೊತೆ ಉತ್ತಮ ಆಡಳಿತದ ಬಗ್ಗೆ ಸಂವಾದ ನಡೆಸುತ್ತಾ ಕಳೆಯಲಿದ್ದೇನೆ. ಮುಂದೆ ರಾಜಕೀಯ ಪಕ್ಷ ಸ್ಥಾಪಿಸಿದರೂ ಅದು ಪ್ರಶಾಂತ್‌ ಕಿಶೋರನ ರಾಜಕೀಯ ಪಕ್ಷ ಆಗಿರುವುದಿಲ್ಲ, ಬದಲಿಗೆ ಜನರ ಪಕ್ಷವಾಗಿರುತ್ತದೆ’ ಎಂದು ತಿಳಿಸಿದರು.