ನವದೆಹಲಿ [ಡಿ.25]: ‘ದೇಶವ್ಯಾಪಿ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಬಗ್ಗೆ ಚರ್ಚೆ ನಡೆಸುವ ಅಗತ್ಯವೇ ಇಲ್ಲ. ಈ ಬಗ್ಗೆ  ಸಂಸತ್ತಿನಲ್ಲಾಗಲಿ ಅಥವಾ ಸಂಪುಟದಲ್ಲಾಗಲಿ ಚರ್ಚೆಯೇ ನಡೆದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ವಿವಾದಿತ ಎನ್‌ಆರ್‌ಸಿ ಜಾರಿ ಸದ್ಯಕ್ಕಂತೂ ಇಲ್ಲ ಎಂಬ ಪರೋಕ್ಷ ಸಂದೇಶವನ್ನು ಅವರು ನೀಡಿದ್ದಾರೆ.

ಮಂಗಳವಾರ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಅವರು, ‘ಈ ಬಗ್ಗೆ (ದೇಶವ್ಯಾಪಿ ಎನ್‌ಆರ್‌ಸಿ) ಬಗ್ಗೆ ಚರ್ಚೆ ನಡೆಸುವ ಅಗತ್ಯವೇ ಇಲ್ಲ ಸದ್ಯಕ್ಕೆ ಈ ಕುರಿತು ಚರ್ಚೆ ನಡೆಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾಗಿ ಹೇಳಿದ್ದಾರೆ. ಸಂಸತ್ತಿನಲ್ಲಾಗಲಿ ಅಥವಾ ಸಂಪುಟ ಸಭೆಯಲ್ಲಾಗಲಿ ಈ ಕುರಿತು ಚರ್ಚೆಯೇ ನಡೆದಿಲ್ಲ’ ಎಂದು ಎನ್‌ಆರ್‌ಸಿ ದೇಶವ್ಯಾಪಿ ಜಾರಿ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಭಾನುವಾರ
ನರೇಂದ್ರ ಮೋದಿ ಕೂಡ, ‘ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಅಸ್ಸಾಂನಲ್ಲಷ್ಟೇ ಎನ್‌ಆರ್‌ಸಿ ಜಾರಿಗೆ ತಂದಿದ್ದೆವು.

ಆದರೆ ದೇಶವ್ಯಾಪಿ ಜಾರಿ ಕುರಿತು ಚರ್ಚೆ ನಡೆದಿಲ್ಲ’ ಎಂದಿದ್ದರು. ಹೀಗಾಗಿ ಎನ್‌ಆರ್‌ಸಿಯಿಂದ ಕೇಂದ್ರ ಸದ್ಯಕ್ಕೆ ದೂರವುಳಿಯಲಿದೆ ಎಂಬುದು ಸ್ಪಷ್ಟವಾಗಿದೆ. 

ಎನ್‌ಪಿಆರ್‌ಗೂ ಎನ್‌ಆರ್‌ಸಿಗೂ ನಂಟಿಲ್ಲ: ‘ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ)ಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೂ (ಎನ್‌ಪಿಆರ್) ಸಂಬಂಧವಿಲ್ಲ. ಎನ್‌ಪಿಆರ್ ಅಡಿ ಹೆಸರು ನೋಂದಾಯಿ ಸಿಕೊಳ್ಳಲು ಆಗದೇ ಇದ್ದರೆ ಅಂಥ ನಾಗರಿಕರ ನಾಗರಿಕತ್ವ ಕ್ಕೇನೂ ಭಂಗ ಬರದು. ಏಕೆಂದರೆ ಇದು ಎನ್‌ಆರ್‌ಸಿ ರೀತಿಯ ಪೌರತ್ವ ನೋಂದಣಿ ಪ್ರಕ್ರಿಯೆ ಅಲ್ಲ’ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು. ‘ಎನ್‌ಪಿಆರ್ ಅನ್ನು ಕೇರಳ ಹಾಗೂ ಪ.ಬಂಗಾಳ ಜಾರಿ ಮಾಡಲ್ಲ ಎಂದುಹೇಳಿವೆ. 

ಇದು ಸರಿಯಲ್ಲ. ಎನ್‌ಪಿಆರ್ ಅಡಿ ದೊರೆತ ಜನರ ಸಂಖ್ಯೆಯನ್ನು ಸರ್ಕಾರದ ಅಭಿವೃದ್ಧಿ ಯೋಜನೆ ಗಳ ಅನುಷ್ಠಾನಕ್ಕೆ ಮಾನದಂಡವಾಗಿ ಬಳಸಿಕೊಳ್ಳುತ್ತೇವೆ. ಆದರೆ ಇದನ್ನು ಅನುಷ್ಠಾನಗೊಳಿಸದೇ ಹೋದರೆ ಬಡವ ರನ್ನು ಯೋಜನೆಗಳಿಂದ ಹೊರಗಿಟ್ಟಂತೆ. ಈ ಬಗ್ಗೆ ಎರಡೂ ರಾಜ್ಯಗಳ ಸಿಎಂ ಜತೆ ಮಾತನಾಡುವೆ’ ಎಂದರು. 

ಒವೈಸಿಗೆ ಟಾಂಗ್: ‘ಪೌರತ್ವ ಕಾಯ್ದೆ, ಎನ್‌ಆರ್‌ಸಿ ವಿರೋಧಿಸುತ್ತಿರುವ ಮಜ್ಲಿಸ್ ಪಕ್ಷದ ಮುಖಂಡ ಅಸಾ ದುದ್ದೀನ್ ಒವೈಸಿ ವಿತಂಡವಾದಿ. ನಾನು ‘ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ’ ಎಂದರೆ ಅವರು ‘ಪಶ್ಚಿಮ’ ಎನ್ನುತ್ತಾರೆ. ಇಂಥವರಿಗೆ ಪೌರತ್ವ ಕಾಯ್ದೆಗೂ ಎನ್‌ಆರ್ ಸಿಗೂ ಸಂಬಂಧವಿಲ್ಲ ಎಂದು ತಿಳಿಹೇಳುವೆ’ ಎಂದರು. 

ಎನ್‌ಆರ್‌ಸಿಗಾಗಿ ಬಂಧನ ಕೇಂದ್ರ ಎಂಬುದಿಲ್ಲ :

 ‘ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆ ನಡೆಸಿದ ನಂತರ ಅಕ್ರಮ ವಲಸಿಗರನ್ನು ಬಂಧಿಸಿಡಲು ಬಂಧನ ಕೇಂದ್ರಗಳನ್ನು ತೆರೆಯಲಾಗಿದೆ’ ಎಂಬುದನ್ನು ಗೃಹ ಸಚಿವ ಅಮಿತ್ ಶಾ ತಳ್ಳಿ ಹಾಕಿದರು. ‘ದೇಶದಲ್ಲಿ ಬಂಧನ ಕೇಂದ್ರಗಳೇ ಇಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಬೆನ್ನಲ್ಲೇ ಶಾ ಅವರ ಈ ಹೇಳಿಕೆ ಬಂದಿದೆ. ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಶಾ ಅವರು, ‘ಬಂಧನ ಕೇಂದ್ರಗಳು ಎಂಬುದು ಇಂದು ನಿನ್ನೆಯದಲ್ಲ. ಮೋದಿ ಸರ್ಕಾರವೇನೂ ಅವನ್ನು ಸ್ಥಾಪಿಸಿಲ್ಲ. ಮೊದಲಿನಿಂದಲೂ ಅವು ಇವೆ. ಅಕ್ರಮ ವಲಸಿಗರನ್ನು ಜೈಲಿನಲ್ಲಿ ಇಡಲಾಗದು. ಅವರನ್ನು ಇಂಥ ಕೇಂದ್ರಗಳಲ್ಲೇ ಇಡುವುದು ನಿರಂತರ ಪ್ರಕ್ರಿಯೆ. ನಂತರ ಅವರ ದೇಶಗಳಿಗೆ ಗಡೀಪಾರು ಮಾಡಲಾಗುತ್ತದೆ. ಎನ್‌ಆರ್‌ಸಿಯಲ್ಲಿ ಗುರುತಿಸಲಾದ ಅಕ್ರಮ ವಲಸಿಗರಿಗೆಂದು ಇವನ್ನು ತೆರೆಯಲಾಗಿದೆ ಎಂಬುದು ಸುಳ್ಳು’ ಎಂದರು.

‘ಅಸ್ಸಾಂನಲ್ಲಿ ಎನ್‌ಆರ್‌ಸಿ ಅಡಿ 19 ಲಕ್ಷ ಅಕ್ರಮ ವಲಸಿಗರನ್ನು ಗುರ್ತಿಸಲಾಗಿದೆ. ಆದರೆ ಅವರನ್ನು ಈ ಕೇಂದ್ರದಲ್ಲಿ ಇಡಲಾಗಿಲ್ಲ. ಅವರವರ ದೇಶಕ್ಕೆ ಮರಳಲು ಅಥವಾ ನ್ಯಾಯಾಲಯದ ಮೊರೆ ಹೋಗಲು 6 ತಿಂಗಳು ಅವಕಾಶ ನೀಡಲಾಗಿದೆ’ ಎಂದು ಶಾ ಸ್ಪಷ್ಟಪಡಿಸಿದರು. ‘ದೇಶದಲ್ಲಿ ಅಸ್ಸಾಂನಲ್ಲಿ ಮಾತ್ರ ಇಂಥ ಬಂಧನ ಕೇಂದ್ರವಿದೆ’ ಎಂದು ಶಾ ಹೇಳಿದರು. ‘ಕರ್ನಾಟಕದಲ್ಲೂ ಇದೆಯಲ್ಲ?’ ಎಂದು ಸಂದರ್ಶಕಿ ಕೇಳಿದಾಗ, ‘ನನಗೆ ಖಚಿತವಾಗಿ ಗೊತ್ತಿಲ್ಲ. ನನ್ನ ಪ್ರಕಾರ ಅಸ್ಸಾಂನಲ್ಲಿ ಮಾತ್ರವಿದೆ’ ಎಂದರು.