ರಾಷ್ಟ್ರ ರಾಜಧಾನಿ ನವದೆಹಲಿಗೆ 10 ದಿನಗಳ ಅಂತರದೊಳಗೆ ಎರಡನೇ ಬಾರಿಗೆ ಭೇಟಿ ನೀಡಿ ಹೈಕಮಾಂಡ್ ನಾಯಕರೊಂದಿಗೆ ಮಾತುಕತೆ ನಡೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಪಕ್ಷದ ವರಿಷ್ಠರ ಜತೆ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನವದೆಹಲಿ (ಮೇ.22): ರಾಷ್ಟ್ರ ರಾಜಧಾನಿ ನವದೆಹಲಿಗೆ 10 ದಿನಗಳ ಅಂತರದೊಳಗೆ ಎರಡನೇ ಬಾರಿಗೆ ಭೇಟಿ ನೀಡಿ ಹೈಕಮಾಂಡ್ ನಾಯಕರೊಂದಿಗೆ ಮಾತುಕತೆ ನಡೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಪಕ್ಷದ ವರಿಷ್ಠರ ಜತೆ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ದೆಹಲಿಯಿಂದ ಬೆಂಗಳೂರಿಗೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ.
ಶನಿವಾರ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಚರ್ಚೆ ಮಾಡಲಾಗಿದೆ. ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯಂತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಮಾತನಾಡಿ ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗೆ ಕಳುಹಿಸಲಾಗಿರುವ ಪಟ್ಟಿಯ ಬಗ್ಗೆ ವಿವರಗಳನ್ನು ನೀಡಲಾಗಿದೆ. ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದರು.
ಮೇಲ್ಮನೆ ಟಿಕೆಟ್ ಕುತೂಹಲ ದಿಲ್ಲಿಗೆ ಶಿಫ್ಟ್: ಇಂದು ಸಿಎಂ-ಅಮಿತ್ ಶಾ ಭೇಟಿ?
ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಮೇ 24 ಕಡೇ ದಿನಾಂಕವಾಗಿದ್ದು ತುರ್ತಾಗಿ ನಿರ್ಣಯಗಳನ್ನು ಕೈಗೊಳ್ಳಬೇಕಿದೆ. ರಾಜ್ಯಸಭೆ ಚುನಾವಣೆಗೆ ಮೇ 31ರವರೆಗೆ ಸಮಯಾವಕಾಶವಿದೆ. ಕೋರ್ ಕಮಿಟಿ ಚರ್ಚೆಯ ನಿರ್ಣಯಗಳ ಬಗ್ಗೆ ಅರುಣ್ ಸಿಂಗ್ ಅವರಿಗೆ ತಿಳಿಸಲಾಗಿದೆ. ಆದಷ್ಟುಬೇಗನೆ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಅಮಿತ್ ಶಾ ಕರೆಯ ಹಿನ್ನೆಲೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರವೇ ನವದೆಹಲಿಗೆ ತೆರಳಿದ್ದರು. ಆದರೆ ಅಮಿತ್ ಶಾ ಗುಜರಾತ್ ರಾಜಕೀಯದ ತುರ್ತು ಬೆಳವಣಿಗೆಗೆ ಸಂಬಂಧಿಸಿ ತುರ್ತು ಸಭೆಗಳನ್ನು ನಡೆಸಬೇಕಾಗಿದ್ದರಿಂದ ಶುಕ್ರವಾರ ರಾತ್ರಿಯೇ ಮುಖ್ಯಮಂತ್ರಿ ಬೊಮ್ಮಾಯಿ ಜೊತೆ ರಾಜ್ಯ ರಾಜಕೀಯದ ಬಗ್ಗೆ ಫೋನಿನಲ್ಲೇ ಚರ್ಚಿಸಿದರು. ಬಳಿಕ ಶನಿವಾರದಂದು ಅರುಣ್ ಸಿಂಗ್ ಜೊತೆ ಮಾತುಕತೆ ನಡೆಸುವಂತೆ ಮುಖ್ಯಮಂತ್ರಿ ಬೊಮ್ಮಯಿಗೆ ಶಾ ಸೂಚಿಸಿದ್ದರು.
ಇಂದು ದಾವೋಸ್‌ಗೆ ಬೊಮ್ಮಾಯಿ ಪ್ರಯಾಣ: ಐದು ದಿನಗಳ ಕಾಲ ನಡೆಯುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಿಜರ್‌ಲೆಂಡ್‌ನ ದಾವೋಸ್‌ಗೆ ಭಾನುವಾರ ಪ್ರಯಾಣ ಬೆಳೆಸಲಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಇದು ಬೊಮ್ಮಾಯಿ ಅವರ ಮೊದಲ ವಿದೇಶ ಪ್ರವಾಸವಾಗಿದೆ.
ಬೊಮ್ಮಾಯಿ ಸಂಪುಟ ಸರ್ಜರಿ ನಡೆಯೋದೆ ಡೌಟ್?: ಸಾಲು ಸಾಲು ಚುನಾವಣೆಗಳು ಎದುರಾಗುತ್ತಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉದ್ದೇಶಿತ ಸಂಪುಟ ಸರ್ಜರಿ ನಡೆಯುವುದೇ ಎಂಬ ಅನುಮಾನ ಶುರುವಾಗಿದೆ. ಈಗಾಗಲೇ ರಾಜ್ಯಸಭೆಯ 4 ಸ್ಥಾನ, ವಿಧಾನಸಭೆಯಿಂದ ವಿಧಾನಪರಿಷತ್ತಿನ 7 ಸ್ಥಾನ ಹಾಗೂ ಪರಿಷತ್ತಿನ 2 ಪದವೀಧರ ಮತ್ತು 2 ಶಿಕ್ಷಕ ಕ್ಷೇತ್ರಗಳ ಚುನಾವಣೆ ಈಗ ಘೋಷಣೆಯಾಗಿದೆ.
ಮೇ 22ಕ್ಕೆ ಸಿಎಂ ಬೊಮ್ಮಾಯಿ ದಾವೋಸ್ ಶೃಂಗಸಭೆಗೆ: ಸಿಎಂ ಆದ ನಂತರ ಮೊದಲ ವಿದೇಶ ಯಾನ!
ಇದೇ ವೇಳೆ ಮುಂದಿನ 8 ವಾರದಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸಿ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ನಡೆಸುವಂತೆ ಸುಪ್ರೀಂಕೋರ್ಚ್ ಸೂಚಿಸಿದೆ. ಇಷ್ಟರಲ್ಲೇ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಘೋಷಣೆ ಬಗ್ಗೆಯೂ ಸ್ಪಷ್ಟಚಿತ್ರಣ ಹೊರಬೀಳುವ ಸಂಭವವಿದೆ. ಹೀಗಿರುವಾಗ ಸಂಪುಟ ಸರ್ಜರಿ ಕೈಗೊಂಡು ಅದರಿಂದ ಉಂಟಾಗಬಹುದಾದ ಭಿನ್ನಮತವನ್ನು ಆಡಳಿತಾರೂಢ ಬಿಜೆಪಿ ಮೈಮೇಲೆ ಎಳೆದುಕೊಳ್ಳುತ್ತದೆಯೇ ಎಂಬುದು ಅನುಮಾನವಾಗಿದೆ.
